ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

| Published : Sep 01 2024, 02:01 AM IST

ಸಾರಾಂಶ

ತುರುವೇಕೆರೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ದ್ವಾರನಹಳ್ಳಿಯಲ್ಲಿ ಶನಿವಾರ ನಡೆದಿದೆ.

ತುರುವೇಕೆರೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ದ್ವಾರನಹಳ್ಳಿಯಲ್ಲಿ ಶನಿವಾರ ನಡೆದಿದೆ.

ತಾಲೂಕಿನ ದ್ವಾರನಹಳ್ಳಿಯ ಸಾಗರ್ ಮೃತ ದುರ್ದೈವಿ. ಈತ ಜೆ.ಪಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದನು. ಸಾಗರ್‌ ತಾಯಿಯ ಜೊತೆಗೆ ಮನೆಯಲ್ಲಿದ್ದ ಸಗಣಿಯನ್ನು ತಿಪ್ಪೆಗೆ ಹಾಕಲು ತೆರಳಿದ್ದ. ಆ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಕಾಣದೇ ತುಳಿದಿದ್ದಾನೆ. ಆ ಕ್ಷಣವೇ ಸಾಗರ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಅಲ್ಲೇ ಇದ್ದ ತಾಯಿ ಮನು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಕಳೆದ ಮೂರ್‍ನಾಲ್ಕು ದಿನಗಳ ಹಿಂದೆಯೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ಕುರಿತು ಬೆಸ್ಕಾಂ ಲೈನ್ ಮೆನ್ ಸೇರಿದಂತೆ ಶಾಖಾ ವ್ಯವಸ್ಥಾಪಕರಿಗೂ ತಿಳಿಸಲಾಗಿತ್ತು. ಆದರೂ ಬೆಸ್ಕಾನ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತಾಳಿದ ಕಾರಣ ಅಮಾಯಕ ಜೀವ ಬಲಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಿಬ್ಬಂದಿಯನ್ನು ಅಮಾನತು ಮಾಡಲು ಸೂಚನೆ:

ಸ್ಥಳಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಆಗಮಿಸಿ ಮಾತನಾಡಿ, ವಿದ್ಯುತ್ ತಂತಿ ತುಂಡಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಅವರನ್ನು ಕೂಡಲೇ ಅಮಾನತಿನಲ್ಲಿಡಬೇಕೆಂದು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಶೇಖರ್‌ಗೆ ಸೂಚನೆ ನೀಡಿದರು.

ವಿದ್ಯಾರ್ಥಿ ಸಾಗರ್ ಬೆಸ್ಕಾಂನ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಸೂಕ್ತ ಪರಿಹಾರವನ್ನು ಬೆಸ್ಕಾಂನಿಂದ ಕೊಡಿಸಬೇಕೆಂದು ಸೂಚಿಸಿದರು.

ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ದೂರು ದಾಖಲು ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.