ಪತ್ನಿ ಕೊಂದು ಕರೆಂಟ್‌ ಶಾಕ್‌ನಿಂದ ಸತ್ತಳೆಂದು ಕತೆ ಕಟ್ಟಿದ!

| Published : Oct 19 2025, 01:00 AM IST

ಪತ್ನಿ ಕೊಂದು ಕರೆಂಟ್‌ ಶಾಕ್‌ನಿಂದ ಸತ್ತಳೆಂದು ಕತೆ ಕಟ್ಟಿದ!
Share this Article
  • FB
  • TW
  • Linkdin
  • Email

ಸಾರಾಂಶ

ಶೀಲ ಶಂಕಿಸಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದು ಪರಾರಿಯಾಗಲು ಯತ್ನಿಸಿದ್ದ ಎಲೆಕ್ಟ್ರಿಶಿಯನ್‌ವೊಬ್ಬನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶೀಲ ಶಂಕಿಸಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದು ಪರಾರಿಯಾಗಲು ಯತ್ನಿಸಿದ್ದ ಎಲೆಕ್ಟ್ರಿಶಿಯನ್‌ವೊಬ್ಬನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮರಗೊಂಡನಹಳ್ಳಿ ನಿವಾಸಿ ಪ್ರಶಾಂತ್ ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ತನ್ನ ಪತ್ನಿ ರೇಷ್ಮಾ (32) ಳನ್ನು ಕೊಂದು ಬಳಿಕ ತಪ್ಪಿಸಿಕೊಂಡಿದ್ದ. ಈ ಬಗ್ಗೆ ಮೃತಳ ಸೋದರಿ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ.

ಇನ್‌ಸ್ಟಾಂನಲ್ಲಿ ಅರಳಿದ ಪ್ರೇಮ: 15 ವರ್ಷಗಳ ಹಿಂದೆ ಅನಾರೋಗ್ಯ ಕಾರಣಕ್ಕೆ ಪತಿ ಮೃತಪಟ್ಟ ಬಳಿಕ ಕಲುಬರಗಿ ಜಿಲ್ಲೆಯ ರೇಷ್ಮಾ, ತನ್ನ ಮಗಳ ಜತೆ ನಗರಕ್ಕೆ ಬಂದು ನೆಲೆಸಿದ್ದಳು. ಹೆಬ್ಬಗೋಡಿ ಸಮೀಪದ ಮರಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಮೂರ್ನಾಲ್ಕು ಮನೆಯಲ್ಲಿ ಕೆಲಸ ಮಾಡಿಕೊಂಡು ಆಕೆ ಜೀವನ ಸಾಗಿಸುತ್ತಿದ್ದಳು. ಹೀಗಿರುವಾಗ ಎರಡು ವರ್ಷಗಳ ಹಿಂದೆ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ವಿಜಯನಗರ ಜಿಲ್ಲೆ ಹೂವಿಡಗಲಿ ತಾಲೂಕಿನ ಎಲೆಕ್ಟ್ರಿಶಿಯನ್ ಪ್ರಶಾಂತ್ ಪರಿಚಯವಾಗಿದೆ. ಕ್ರಮೇಣ ಪ್ರೀತಿಗೆ ತಿರುಗಿದೆ.

9 ತಿಂಗಳ ಹಿಂದೆ ಹೂವಿನಹಡಗಲಿಗೆ ಕರೆದೊಯ್ದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರೇಷ್ಮಾ ಜತೆ ಪ್ರಶಾಂತ್ ಮದುವೆಯಾಗಿದ್ದ. ವಿವಾಹವಾದ ಬಳಿಕ ಮರಗೊಂಡನಹಳ್ಳಿಯಲ್ಲಿ ದಂಪತಿ ನೆಲೆಸಿದ್ದರು. ಆದರೆ ಇತ್ತೀಚೆಗೆ ತನ್ನ ಪತ್ನಿ ನಡವಳಿಕೆ ಮೇಲೆ ಆತನಿಗೆ ಅನುಮಾನ ಶುರುವಾಯಿತು. ಪರ ಪುರುಷನ ಸಹವಾಸದಲ್ಲಿ ಪತ್ನಿ ಇದ್ದಾಳೆ ಎಂಬ ಶಂಕೆ ಇತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ್ಗೆ ಸತಿ-ಪತಿ ಮಧ್ಯೆ ಜಗಳವಾಗುತ್ತಿದ್ದವು. ಅಂತೆಯೇ ಅ.18 ರಂದು ಬೆಳಗ್ಗೆ ಸಹ ಪ್ರಶಾಂತ್ ಹಾಗೂ ರೇಷ್ಮಾ ಮಧ್ಯೆ ಗಲಾಟೆಯಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ರೇಷ್ಮಾಳ ಕಪಾಳಕ್ಕೆ ಬಿಗಿದಿದ್ದಾನೆ. ಈ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ಆಕೆಯನ್ನು ಕತ್ತು ಹಿಸುಕಿ ಆರೋಪಿ ಕೊಂದಿದ್ದಾನೆ.

ಕರೆಂಟ್‌ ಶಾಕ್‌ನಿಂದ ಸಾವೆಂದು ಕತೆ ಕಟ್ಟಲು ಯತ್ನ

ಹತ್ಯೆ ನಂತರ ಮೃತದೇಹವನ್ನು ಸ್ನಾನದ ಮನೆಗೆ ಎಳೆದೊಯ್ದು ಆರೋಪಿ ಹಾಕಿದ್ದಾನೆ. ಅಲ್ಲಿ ಟಬ್‌ನಲ್ಲಿ ನೀರು ತುಂಬಿಸಿ ವಿದ್ಯುತ್‌ ಹೀಟರ್ ಹಾಕಿದ್ದಾನೆ. ವಿದ್ಯುತ್ ಶಾಕ್‌ನಿಂದ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಹೇಳಿ ಜನರನ್ನು ನಂಬಿಸಲು ಪ್ರಶಾಂತ್ ಯತ್ನಿಸಿದ್ದಾನೆ. ಆದರೆ ಶಾಲೆ ಮುಗಿಸಿ ಮನೆಗೆ ಬಂದ ಮೃತಳ ಮಗಳು, ಸ್ನಾನಗೃಹದಲ್ಲಿ ಪ್ರಜ್ಞಾಹೀನಳಾಗಿದ್ದ ತಾಯಿ ಕಂಡು ಆತಂಕಗೊಂಡಿದ್ದಾಳೆ. ಕೂಡಲೇ ತನ್ನ ಸಂಬಂಧಿಕರಿಗೆ ಆಕೆ ತಿಳಿಸಿದ್ದಾಳೆ. ಬಳಿಕ ಪೊಲೀಸರಿಗೆ ಮೃತಳ ಸೋದರಿ ದೂರು ನೀಡಿದ್ದಳು. ಪೊಲೀಸರಿಗೆ ತನ್ನ ತಾಯಿ ಚಾರಿತ್ರ್ಯ ಶಂಕಿಸಿ ತಂದೆ ಗಲಾಟೆ ಮಾಡುತ್ತಿದ್ದುದಾಗಿ ಮೃತಳ ಪುತ್ರಿ ಹೇಳಿಕೆ ಕೊಟ್ಟಿದ್ದಳು. ಈ ಹೇಳಿಕೆ ಆಧರಿಸಿ ಪ್ರಶಾಂತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆರಂಭದಲ್ಲಿ ವಿದ್ಯುತ್ ಶಾಕ್‌ನಿಂದ ರೇಷ್ಮಾ ಮೃತಪಟ್ಟಿದ್ದಾಳೆ ಎಂದು ಆರೋಪಿ ಹೇಳಿದ್ದ. ಆದರೆ ವಿದ್ಯುತ್ ಶಾಕ್‌ನಿಂದ ಮೃತದೇಹದಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಸ್ಪಷ್ಟಪಡಿಸಿದ್ದರು. ಈ ಮಾಹಿತಿ ಹಿನ್ನೆಲೆಯಲ್ಲಿ ಮತ್ತೆ ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.