ಸಾರಾಂಶ
ರಾಜ್ಯದಲ್ಲಿ ಕಳೆದ 23 ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆ ಸೇರಿದಂತೆ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ.
----
ಕನ್ನಡಪ್ರಭ ವಾರ್ತೆ ಮೈಸೂರುಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ (ಎಐಟಿಯುಸಿ ಸಂಯೋಜಿತ) ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದರು.ರಾಜ್ಯದಲ್ಲಿ ಕಳೆದ 23 ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆ ಸೇರಿದಂತೆ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ಮಾಸಿಕ 3700 ರೂ. ಹಾಗೂ ಸಹಾಯಕ ಅಡುಗೆಯವರಿಗೆ 3600 ರೂ. ವೇತನ ನೀಡಲಾಗುತ್ತಿದ್ದು, ಇದರಿಂದ ಬಿಸಿಯೂಟ ನೌಕರರು ಕಷ್ಟದಿಂದ ಜೀವನ ನಡೆಸಬೇಕಾಗಿದೆ ಎಂದು ಅವರು ಅಳಲು ತೋಡಿಕೊಂಡರು.ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಬಿಸಿಯೂಟ ನೌಕರರ ವೇತನವನ್ನು 6 ಸಾವಿರಕ್ಕೆ ಏರಿಸಲಾಗುವುದು ಎಂದು ಘೋಷಿಸಿದ್ದು, ಮುಂಬರುವ ಬಜೆಟ್ ನಲ್ಲಿ ಅದಕ್ಕಾಗಿ ಹಣ ಮೀಸಲಿಟ್ಟು, ಬಿಸಿಯೂಟ ನೌಕರರ ವೇತನವನ್ನು 6 ಸಾವಿರಕ್ಕೆ ಏರಿಸಬೇಕು. 60 ವರ್ಷ ವಯಸ್ಸಾಗಿ ನಿವೃತ್ತಿಯಾದ ನೌಕರರಿಗೆ ಕನಿಷ್ಟ 2 ಲಕ್ಷ ಇಡಗಂಟು ನೀಡಬೇಕು ಎಂದು ಅವರು ಒತ್ತಾಯಿಸಿದರು.ಬಿಸಿಯೂಟ ಯೋಜನೆ ಆರಂಭವಾದಂದಿನಿಂದ ರಾಜ್ಯದಲ್ಲಿ ಅಡುಗೆ ತಯಾರಿಸುವಾಗ ದುರಂತ ನಡೆದು ಸುಮಾರು 15 ಮಂದಿ ಮೃತಪಟ್ಟಿದ್ದಾರೆ. ಇವರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ. ಅವರಿಗೆ 10 ಲಕ್ಷ ಜಾರಿ ಮಾಡಬೇಕು. ಇಂತಹ ಘಟನೆಗಳಲ್ಲಿ ಗಾಯಗೊಂಡವರ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಅವರು ಆಗ್ರಹಿಸಿದರು.1972ರ ಕಾರ್ಮಿಕ ಕಾಯ್ದೆಯಂತೆ ನಿವೃತ್ತಿ ಹೊಂದುವ ಎಲ್ಲಾ ಬಿಸಿಯೂಟ ನೌಕರರಿಗೂ ಗ್ರ್ಯಾಚ್ಯುಟಿ ನೀಡಬೇಕು. ವಾರಕ್ಕೆ ಆರು ದಿನ ಮೊಟ್ಟೆ ವಿತರಿಸುವುದರಿಂದ ಮೊಟ್ಟೆ ಸುಳಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ 60 ಪೈಸೆಗೆ ಏರಿಸಬೇಕು. 3– 4 ತಿಂಗಳಿಗೊಮ್ಮೆ ವೇತನ ನೀಡುವ ವ್ಯವಸ್ಥೆಯನ್ನು ನಿಲ್ಲಿಸಿ, ಪ್ರತೀ ತಿಂಗಳ 5ನೇ ತಾರೀಕಿನೊಳಗೆ ವೇತನ ಪಾವತಿಸಬೇಕು. ಬರಗಾಲ ಕಾರ್ಯಕ್ರಮದ ವೇತನ ಪಾವತಿಸಬೇಕು ಎಂದು ಅವರು ಒತ್ತಾಯಿಸಿದರು.ಫೆಡರೇಷನ್ ಜಿಲ್ಲಾ ಸಂಚಾಲಕ ಕೆ.ಜಿ. ಸೋಮರಾಜೇ ಅರಸ್, ಜಿಲ್ಲಾ ಸಮಿತಿ ಸದಸ್ಯರಾದ ಪದ್ಮಾ, ಸಾವಿತ್ರಮ್ಮ, ಚಂದ್ರಮ್ಮ, ಶಾಂತಮ್ಮ, ಭಾಗ್ಯಮ್ಮ, ಸುನೀತಾ, ನಾಗಮ್ಮ, ಪ್ರಭಾಮಣಿ ಮೊದಲಾದವರು ಇದ್ದರು.