ಜೋಳ ತಿಂದವನು ತೋಳದಂತೆ ಬಲಿಷ್ಠ ಸತ್ಯ

| Published : Dec 25 2024, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜೋಳ ತಿಂದವನು ತೋಳದಂತೆ ಬಲಿಷ್ಠನಾಗುತ್ತಾನೆ ಎಂಬ ಗಾದೆ ಸತ್ಯ ಎಂದು ಅಖಿಲ ಭಾರತ ಜೋಳ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ.ಆರ್.ಮಧುಸೂಧನ ಹೇಳಿದರು. ನಿಡಗುಂದಿ ತಾಲೂಕಿನ ಉಣ್ಣಿಭಾವಿ ಗ್ರಾಮದಲ್ಲಿ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಅಖಿಲ ಭಾರತ ಜೋಳ ಅಬಿವೃದ್ಧಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಪ್ರದೇಶಗಳಲ್ಲಿ ಸಿರಿಧಾನ್ಯ ತಂತ್ರಜ್ಞಾನಗಳ ಪ್ರಚಾರ ಹಾಗೂ ಅಳವಡಿಕೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೋಳದಲ್ಲಿ ಅನೇಕ ಉತ್ತಮ ಪೋಷಕಾಂಶಗಳಿವೆ, ಶಕ್ತಿವರ್ಧಕವಾಗಿದೆ, ತೋಳವನ್ನು ದೊಡ್ಡ ದೊಡ್ಡ ಕಾಡು ಪ್ರಾಣಿಗಳು ಸಹ ಬೇಟೆಯಾಡಲು ಹೆದರುತ್ತವೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜೋಳ ತಿಂದವನು ತೋಳದಂತೆ ಬಲಿಷ್ಠನಾಗುತ್ತಾನೆ ಎಂಬ ಗಾದೆ ಸತ್ಯ ಎಂದು ಅಖಿಲ ಭಾರತ ಜೋಳ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ.ಆರ್.ಮಧುಸೂಧನ ಹೇಳಿದರು.

ನಿಡಗುಂದಿ ತಾಲೂಕಿನ ಉಣ್ಣಿಭಾವಿ ಗ್ರಾಮದಲ್ಲಿ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಅಖಿಲ ಭಾರತ ಜೋಳ ಅಬಿವೃದ್ಧಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಪ್ರದೇಶಗಳಲ್ಲಿ ಸಿರಿಧಾನ್ಯ ತಂತ್ರಜ್ಞಾನಗಳ ಪ್ರಚಾರ ಹಾಗೂ ಅಳವಡಿಕೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೋಳದಲ್ಲಿ ಅನೇಕ ಉತ್ತಮ ಪೋಷಕಾಂಶಗಳಿವೆ, ಶಕ್ತಿವರ್ಧಕವಾಗಿದೆ, ತೋಳವನ್ನು ದೊಡ್ಡ ದೊಡ್ಡ ಕಾಡು ಪ್ರಾಣಿಗಳು ಸಹ ಬೇಟೆಯಾಡಲು ಹೆದರುತ್ತವೆ. ಅಷ್ಟೊಂದು ಶಕ್ತಿ ತೋಳದಲ್ಲಿದೆ. ಹೀಗಾಗಿಯೇ ಹಿರಿಯರು ಜೋಳ ತಿಂದರೆ ತೋಳದಂತಹ ಶಕ್ತಿ ಬರುತ್ತದೆ ಎಂಬರ್ಥದಲ್ಲಿ ಈ ಗಾದೆಯನ್ನು ಹೇಳಿದ್ದಾರೆ. ಆದರೆ, ರೈತರು ಈ ಭಾಗದ ಪ್ರಮುಖ ಬೆಳೆ ಜೋಳವನ್ನು ಇತ್ತೀಚೆಗೆ ನಿರ್ಲಕ್ಷಸುತ್ತಿದ್ದು, ಇದರಿಂದಾಗಿ ಜನರು ಅಪೌಷ್ಠಿಕತೆ ಸೇರಿದಂತೆ ಮುಂತಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತ ಈ ದೇಶದ ಬೆನ್ನೆಲುಬು, ಕೃಷಿ ಪ್ರಧಾನವಾದ ನಮ್ಮ ದೇಶದ ರೈತರ ಮಕ್ಕಳು ನೌಕರಿಗಾಗಿ ಕೃಷಿಯಿಂದ ದೂರ ಸರಿಯುತ್ತಿರುವುದು ಕಳವಳಕಾರಿಯಾದ ಸಂಗತಿ ಎಂದರು.ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್‌ ಅವರ ಜನ್ಮ ದಿನವನ್ನು ರಾಷ್ಟ್ರೀಯ ರೈತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಈ ಸಲದ ಘೋಷ್ಯವಾಕ್ಯ ಸುಸ್ಥಿರ ಕೃಷಿ ಪುನಶ್ಚೇತನಕ್ಕಾಗಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಎಂಬುದಾಗಿದೆ. ಡಾ.ಚೌದರಿ ಚರಣಸಿಂಗ್ ಅವರು ರೈತರ ಸಮಗ್ರ ಏಳ್ಗೆಗಾಗಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು, ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದಾಗಿ ರೈತರು ಸ್ವಾವಲಂಬಿ ಬದುಕು ಸಾಗಿಸಲು ಅನುಕೂಲವಾಗಬೇಕು ಎಂಬ ಮಹಾದಾಸೆ ಅವರಲ್ಲಿತ್ತು. ದೇಶಕ್ಕೆ ಅನ್ನ ನೀಡುವ ರೈತರನ್ನು, ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ನೆನೆಯುವ ಸಲುವಾಗಿ ಈ ದಿನವನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಅಚರಿಸಲಾಗುತ್ತಿದೆ ಎಂದು ವಿವರಿಸಿದರು. ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಬಿ.ಜಗ್ಗಿನವರ ಮಾತನಾಡಿ, ರೈತರು ಸಂಘಟಿತರಾಗಬೇಕು, ಕೃಷಿಯನ್ನು ನಂಬಿ ಶ್ರಮವಹಿಸಿ ದುಡಿಯಬೇಕು. ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಬೇಕು. ಅಗಲೇ ಅವರ ಬದುಕು ಹಸನಾಗುತ್ತದೆ. ಬೆಳೆಗಳಲ್ಲಿ ನೂತನ ತಳಿಗಳನ್ನು ಆಯ್ಕೆಮಾಡಿ ಅಧಿಕ ಇಳುವರಿ ಪಡೆಯುವಂತೆ ಸಲಹೆ ನೀಡಿದರು. ಡಾ.ಎಸ್.ಎಸ್.ಕರಭಂಟನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಜೋಳದಲ್ಲಿ ಹತ್ತು ಹಲವು ತಳಿಗಳಿವೆ. ಪಶುಸಾಕಣಿಕೆಗೆ ಸಾಕಷ್ಟು ಉತ್ತಮ ಮೇವು ಕೊಡುವ ತಳಿಗಳಿವೆ. ಅದಕ್ಕಾಗಿ ಜೋಳ ಮತ್ತು ಸಿರಿಧಾನ್ಯ ಬೆಳೆಗಳಿಗೆ ತಮ್ಮ ಯೋಜನೆಯಿಂದ ರೈತರಿಗಾಗಿ ಹಲವಾರು ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು. ಉತ್ತರ ಕರ್ನಾಟಕದ ಸೀತನಿ ಜೋಳ ಕುರಿತು ಹಸ್ತ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಹಾಗೂ ಆಯ್ದ ಫಲಾನುಭವಿ ರೈತರಿಗೆ ಯೋಜನೆಯಡಿಯಲ್ಲಿ ಕೀಟನಾಶಕ ಸಿಂಪರಣೆ ಸಾಧನ ಮತ್ತು ತಾಡಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಬೀರಲದಿನ್ನಿ ಗ್ರಾಪಂ ಅಧ್ಯಕ್ಷ ರಮಜಾಬಾನು ಪಟೇಲ ವಹಿಸಿದ್ದರು. ಡಾ.ಚಂದ್ರಕಾಂತ ಸೋರೆಗಾವಿ, ಡಾ.ಅಶ್ವತ್ಥಾಮ.ಎ.ಹೆಚ್, ಬಾಲಕೃಷ್ಣ ಗೌಡರ, ಅಶೋಕ ಕೊನರಡ್ಡಿ, ಬಸವರಾಜ ಕೊನರಡ್ಡಿ, ಸಂಗನಗೌಡ ಕೊನರಡ್ಡಿ, ಭೀಮನಗೌಡ ಕೊನರಡ್ಡಿ, ಶೇಖರ ಗೂಗಿಹಾಳ, ವೀರಣ್ಣ ಮನಗೊಂಡ, ಮಲ್ಲನಗೌಡ ನಾಡಗೌಡ, ಸತೀಶ ನರಸರಡ್ಡಿ, ಅಶೋಕ ಕೊನರಡ್ಡಿ, ಚನ್ನಪ್ಪ ಕಂಬಳಿ, ಶಂಕ್ರೆಪ್ಪ ಹೂಗಾರ, ಸಾಹೇಬಗೌಡ ಪಾಟೀಲ, ಮಹಾದೇವಪ್ಪ ಕೊನರಡ್ಡಿ, ತಿಮ್ಮನಗೌಡ ಪಾಟೀಲ, ಮಂಜುನಾಥ ಸವಣೂರ, ರಾಧಾ ಚಲವಾದಿ, ಶ್ರೀಶೈಲ ಕೊನರಡ್ಡಿ, ವನಕೇರಪ್ಪಗೌಡ ನರಸರಡ್ಡಿ ಉಪಸ್ಥಿತರಿದ್ದರು.

ಕೋಟ್‌ಜೋಳದಲ್ಲಿ ಉತ್ತಮ ಪೋಷಕಾಂಶಗಳಿವೆ, ಶಕ್ತಿವರ್ಧಕ. ತೋಳವನ್ನು ಕಾಡು ಪ್ರಾಣಿಗಳು ಸಹ ಬೇಟೆಯಾಡಲು ಹೆದರುತ್ತವೆ. ಅಷ್ಟೊಂದು ಶಕ್ತಿ ತೋಳದಲ್ಲಿದೆ. ಹೀಗಾಗಿಯೇ ಈ ಗಾದೆಯನ್ನು ಹೇಳಿದ್ದಾರೆ. ಆದರೆ, ರೈತರು ನಮ್ಮ ಪ್ರಮುಖ ಬೆಳೆ ಜೋಳವನ್ನು ಇತ್ತೀಚೆಗೆ ನಿರ್ಲಕ್ಷಸುತ್ತಿದ್ದು, ಇದರಿಂದಾಗಿ ಜನರು ಅಪೌಷ್ಠಿಕತೆ ಸೇರಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಡಾ.ಆರ್.ಮಧುಸೂಧನ, ಜೋಳ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ