ಸಾರಾಂಶ
ತುಮಕೂರು: ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐದು ಮಂದಿ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾದ ಘಟನೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಬಳಿ ಭಾನುವಾರ ರಾತ್ರಿ ನಡೆದಿದೆ. ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಜನಾರ್ಧನ ರೆಡ್ಡಿ (50), ಸಿಂಧೂ (40), ದೇವಾ (8), ಹಾಗೂ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ಗ್ರಾಮದ ಸಿದ್ದಗಂಗಪ್ಪ (34), ನಾಗರಾಜು (30) ಮೃತ ದುರ್ದೈವಿಗಳು. ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಗೀತಾ ಹಾಗೂ ಪುತ್ರ ಯೋಧ, ಮತ್ತೊಂದು ಕಾರಿನ ಚಾಲಕ ಆನಂದ್ ಹಾಗೂ 14 ತಿಂಗಳ ಗಂಡು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪಾವಗಡ ಮೂಲದ ಎತ್ತಿನಹಳ್ಳಿ ಗ್ರಾಮದ ಜನಾರ್ಧನ ರೆಡ್ಡಿ ಕುಟುಂಬಸ್ಥರು ಗೌರಿ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದರು. ಮತ್ತೊಂದು ಕುಟುಂಬ ಕೊರಟಗೆರೆಯಿಂದ ಮಧುಗಿರಿಗೆ ಬರುತ್ತಿರುವಾಗ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಮೃತದೇಹಗಳನ್ನು ಮಧುಗಿರಿ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆವಿ ಅಶೋಕ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.