ಕನ್ನಡಪ್ರಭ ವಾರ್ತೆ ಚನ್ನಗಿರಿ

ಸರ್ಕಾರಿ ನೌಕರರಾಗಿ ಸೇರಿದ ಪ್ರತಿಯೊಬ್ಬರು 60 ವರ್ಷ ತುಂಬಿದ ನಂತರ ನಿವೃತ್ತಿ ಆಗುವುದು ಸಹಜ ಪ್ರಕ್ರಿಯೆ. ಸರ್ಕಾರಿ ಸೇವೆ ಸಲ್ಲಿಸುವ ಅವಧಿಯಲ್ಲಿ ನೌಕರರು ತಾವು ಮಾಡಿದ ಉತ್ತಮ ಕೆಲಸಗಳಿಂದ ಪ್ರಶಂಶಿಸಲ್ಪಡುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹೇಳಿದರು.

ಶನಿವಾರ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಮಾಧ್ಯಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕರಿಸಿದ್ದಪ್ಪ ಮಾಸ್ತರ್ ಬೀಳ್ಕೋಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೇವೆಯಿಂದ ನಿವೃತ್ತಿ ಹೊಂದಿರುವ ಕರಿಸಿದ್ದಪ್ಪ ಮಾಸ್ತರ್ 36 ವರ್ಷಗಳ ಸೇವಾ ಅನುಭವದಲ್ಲಿ 13 ವರ್ಷಗಳ ಕಾಲ ತಾಲೂಕಿನ ಇಟ್ಟಿಗೆ ಗ್ರಾಮದ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಅವರಿಗೆ ಬರುತ್ತಿದ್ದ ಸಂಬಳದಲ್ಲಿ ಅತಿಥಿ ಶಿಕ್ಷಕರಿಗೆ ಮತ್ತು ಅಡುಗೆ ಸಹಾಯಕರಿಗೆ ತಮ್ಮ ಸಂಬಳದ ಹಣದಲ್ಲಿ ₹15 ಸಾವಿರ ನೀಡುತ್ತಿದ್ದರು. ಇಂತಹ ಸೇವಾ ಭಾವನೆಗಳು ಎಲ್ಲ ಶಿಕ್ಷಕರಲ್ಲಿ ಬರಬೇಕು ಎಂದರು.

ಎರೆಗುಂಟೆಯ ಶ್ರೀ ಪರಮೇಶ್ವರ ಸ್ವಾಮಿಗಳು, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಸಿ ಅಧ್ಯಕ್ಷ ಆರ್.ಬೈರೇಶ್, ಮಹಾಂತೇಶ ಶಾಸ್ತ್ರಿ, ದೈವಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಬೂದಿಸ್ವಾಮಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಮಹಾಲಕ್ಷ್ಮೀ ಅಕ್ಕ, ನಿವೃತ್ತ ಶಿಕ್ಷಕ ಸಿದ್ದಪ್ಪ, ನರಶೆಟ್ಟಿಹಳ್ಳಿ ತಿಪ್ಪೇಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಕಾವ್ಯ ಭಾಗವಹಿಸಿದ್ದರು.


ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಕರಿಸಿದ್ದಪ್ಪ ದಂಪತಿಗೆ ಇಲಾಖೆ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

- - -

-1ಕೆಸಿಎನ್ಜಿ2: ಸೇವೆಯಿಂದ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಕರಿಸಿದ್ದಪ್ಪ ಮಾಸ್ತರ್ ಅವರನ್ನು ಸನ್ಮಾನಿಸಲಾಯಿತು.