ಪೌಷ್ಟಿಕ ಕೈತೋಟದಿಂದ ಆರೋಗ್ಯ ಭಾಗ್ಯ: ಜಯಶ್ರೀ ಕೋಳೂರ

| Published : Aug 26 2024, 01:33 AM IST

ಸಾರಾಂಶ

ಮುಂಡಗೋಡ ತಾಲೂಕಿನ ತಮ್ಯಾನಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲು ತರಕಾರಿ ಹಾಗೂ ಸೊಪ್ಪು ಬೀಜಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಮುಂಡಗೋಡ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಬೆಳವಣಿಗೆ ಮತ್ತು ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಟಿಕ ಕೈತೋಟ ಮಾಡಿ ತರಕಾರಿ ಬೆಳೆದು ಮಕ್ಕಳ ನಿತ್ಯದ ಆಹಾರದಲ್ಲಿ ಸೇವನೆ ಮಾಡುವುದರಿಂದ ಮಕ್ಕಳ ಪೌಷ್ಟಿಕತೆ ಹೆಚ್ಚಿಸಬಹುದಲ್ಲದೆ ಆರೋಗ್ಯವಂತರಾಗುತ್ತಾರೆ ಎಂದು ಮುಂಡಗೋಡ ಇನ್ನರ್ ವ್ಹಿಲ್‌ ಕ್ಲಬ್ ಅಧ್ಯಕ್ಷೆ ಜಯಶ್ರೀ ಕೋಳೂರ ತಿಳಿಸಿದರು.ತಾಲೂಕಿನ ತಮ್ಯಾನಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲು ತರಕಾರಿ ಹಾಗೂ ಸೊಪ್ಪು ಬೀಜಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ೧೦ ಅಂಗನವಾಡಿಗಳಿಗೆ ವಿವಿಧ ತರಕಾರಿಗಳ ಬೀಜಗಳನ್ನು ನೀಡಿದ್ದೇವೆ. ಇದರಿಂದ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದು ನಮ್ಮ ಇನ್ನರ್ ವ್ಹಿಲ್ ಕ್ಲಬ್‌ನ ಮುಖ್ಯ ಗುರಿಯಾಗಿದೆ ಎಂದರು. ಚವಡಳ್ಳಿ ಪಂಚಾಯಿತಿ ಉಪಾಧ್ಯಕ್ಷ ಪ್ರದೀಪ ಚವ್ಹಾಣ ಮಾತನಾಡಿ, ರಾಸಾಯನಿಕ ಗೊಬ್ಬರ ಬಳಸಿದ ತರಕಾರಿಗಳನ್ನು ಬಳಸುವುದರಿಂದ ವಿಶೇಷವಾಗಿ ಬೆಳೆಯುವ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ. ಅಂಗನವಾಡಿಯಲ್ಲಿ ಕೈತೋಟ ನಿರ್ಮಾಣ ಮಾಡಿ ಬೀಜ ಬಿತ್ತನೆ ಮಾಡಿ ತರಕಾರಿಗಳನ್ನು ಬೆಳೆದು ಅಡುಗೆ ತಯಾರಿಸಿ ಮಕ್ಕಳಿಗೆ ಊಣ ಬಡಿಸುವುದರಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚುತ್ತದೆ. ಮತ್ತು ಲೊಯೋಲ ವಿಕಾಸ ಕೇಂದ್ರದ ಸಂಸ್ಥೆಯವರು ಕಳೆದ ೨ ವರ್ಷದಿಂದ ತಮ್ಯಾನಕೊಪ್ಪದಲ್ಲಿ ಮಕ್ಕಳು, ಮಹಿಳೆಯರು ಮತ್ತು ಅರಣ್ಯ ಅವಲಂಬಿತರಿಗಾಗಿ ಸತತವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದರು. ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ ರಾಠೋಡ್ ಮಾತನಾಡಿ, ಲೊಯೋಲಾ ವಿಕಾಸ ಕೇಂದ್ರವು ಸುಸ್ಥಿರ ಅಭಿವೃದ್ದಿ ಯೋಜನೆಯಡಿಯಲ್ಲಿ ಕೈತೋಟ ನಿರ್ಮಾಣ ಮಾಡಲು೧೦ ಹಳ್ಳಿಯ ಅಂಗನವಾಡಿಗಳಿಗೆ ಅಗತ್ಯ ವಸ್ತುಗಳಾದ ನೀರಿನ ಪೈಪು, ತಂತಿ, ಸಿಮೆಂಟ್ ಕಂಬ, ಸಲಿಕೆಗಳು, ನೀರಿನ ಬಕೆಟ್ ವಿತರಿಸಿದೆ ಎಂದರು.

ಶಿಕ್ಷಕಿ ಸಾವಿತ್ರಿ ದೇವರಮಠ, ಇನ್ನರ್‌ವಿಲ್ ಕ್ಲಬ್ ಆಡಿಟರ್ ಕವಿತಾ ಮಾತ್ರೋಜಿ, ದಿವ್ಯ ರಾವ್, ಸದಸ್ಯರಾದ ಜಯಾ ಸೆಲ್ವಿ, ವಾಣಿ ಪಿ, ಪ್ರಿಯಾ ಪಾಲೇಕರ್, ಆಶಾ ಕಾರ್ಯಕರ್ತೆ ಅನಿತಾ ಜಾಧವ್, ಬಾಲವಿಕಾಸ ಸಮಿತಿ ಸದಸ್ಯರಾದ ಚೈತ್ರಾ ರಾಠೋಡ್ ಹಾಗೂ ಎಲ್‌ವಿಕೆ ಸಿಬ್ಬಂದಿ ಮಲ್ಲಮ್ಮಾ ನೀರಲಗಿ, ತೇಜಸ್ವಿನಿ ಬೇಗೂರು, ದೀಪಾ ಕೋಳೂರು, ಸಮುದಾಯದ ಜನರು ಭಾಗವಹಿಸಿದರು. ಮಲ್ಲಮ್ಮ ನೀರಲಗಿ ನಿರೂಪಿಸಿದರು. ತೇಜಸ್ವಿನಿ ಬೇಗೂರು ಸ್ವಾಗತಿಸಿದರು. ದೀಪಾ ಕೋಳೂರು ವಂದಿಸಿದರು.