ಸಾರಾಂಶ
ಕಾಮಗಾರಿಯ ಸ್ಥಳದಲ್ಲೇ ಆರೋಗ್ಯ ತಪಾಸಣಾ ಶಿಬಿರ,ಉದ್ಯೋಗ ಚೀಟಿ ಪರಿಷ್ಕರಣೆ ಮತ್ತು ಸ್ತ್ರೀಚೇತನ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ಕುರುವತ್ತಿ ಗ್ರಾಪಂ ವ್ಯಾಪ್ತಿಯ, ಕುರುವತ್ತಿ ಪ್ಲಾಟ್ ಹತ್ತಿರದ ದೊಡ್ಡಕಟ್ಟೆ ಕೆರೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ 614 ನರೇಗಾ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದು, ಕಾಮಗಾರಿಯ ಸ್ಥಳದಲ್ಲೇ ಆರೋಗ್ಯ ತಪಾಸಣಾ ಶಿಬಿರ,ಉದ್ಯೋಗ ಚೀಟಿ ಪರಿಷ್ಕರಣೆ ಮತ್ತು ಸ್ತ್ರೀಚೇತನ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.ನರೇಗಾ ಯೋಜನೆ ಸಹಾಯಕ ನಿರ್ದೇಶಕ ಡಿ. ವೀರಣ್ಣ ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿಕಾರರು ಬೇಸಿಗೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ನರೇಗಾ ಯೋಜನೆಯಡಿ ಏ.1ರಿಂದ ಪ್ರತಿ ದಿನಕ್ಕೆ ಕೂಲಿಕಾರರಿಗೆ ₹370 ಕೂಲಿ ಹೆಚ್ಚಳ ಮಾಡಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರೈತರ ಜಮೀನು, ಹೊಲ ಗದ್ದೆಗಳಲ್ಲಿ ಯಾವುದೇ ಕೃಷಿ ಚಟುವಟಿಕೆ ಇರುವುದಿಲ್ಲ,ಹಾಗಾಗಿ ಎರಡು ತಿಂಗಳು ನಿರಂತರವಾಗಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ ಎಂದರು.ಏಪ್ರಿಲ್ ಹಾಗೂ ಮೇ ತಿಂಗಳು ಬಿಸಿಲಿನ ತಾಪಮಾನ ಹೆಚ್ಚಾಗಿದೆ, ಇದರಿಂದ ಶೇ. 30 ರಷ್ಟು ಕೆಲಸದ ಅಳತೆಯಲ್ಲಿ ರಿಯಾಯ್ತಿ ಇದೆ ಹಾಗೂ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಕೆಲಸದ ಅಳತೆಯ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯ್ತಿ ನೀಡಲಾಗಿದೆ. ಇದರೊಂದಿಗೆ ಶೇ.60ರಷ್ಟು ಮಹಿಳೆಯರು ನರೇಗಾ ಕೆಲಸದಲ್ಲಿ ಭಾಗಿಯಾಗಿ ಸ್ತ್ರೀ ಚೇತನ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ನರೇಗಾ ಕೂಲಿ ಕಾರ್ಮಿಕರು ಹೊಂದಿರುವ ಉದ್ಯೋಗ ಚೀಟಿ ಪರಿಷ್ಕರಣೆ ಅಭಿಯಾನ ಕೈಗೊಂಡಿದ್ದು, ಹೊಸದಾಗಿ ಉದ್ಯೋಗ ಖಾತ್ರಿ ಕಾರ್ಡ್ ಪಡೆಯುವವರು, ಹೆಸರು ಸೇರ್ಪಡೆ ಮಾಡುವವರು, ಮದುವೆಯಾಗಿ ಬೇರೆ ಕಡೆ ಹೋದವರು ಮತ್ತು ಮರಣ ಹೊಂದಿದವರ ಹೆಸರನ್ನು ರದ್ದುಪಡಿಸಲು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಗುತ್ತೆಪ್ಪ ತಳವಾರ್, ವೈದ್ಯಾಧಿಕಾರಿ ಚೆನ್ನಪ್ಪ ನಾಯಕ್,ಬಸವಂತಪ್ಪ ಎಸ್, ಟಿಐಇಸಿ ಪ್ರಕಾಶ್ ನಾಯಕ್, ರವಿಕುಮಾರ್, ನರೇಶ್, ಶಿವರಾಜ್, ಅನುಸೂಯಮ್ಮ, ಆಶಾ ಕಾರ್ಯಕರ್ತರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))