ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ದೊಡ್ಡಬಳ್ಳಾಪುರ ವಿಜಯ ದಂತ ಚಿಕಿತ್ಸಾಲಯ ಮತ್ತು ದೇವನಹಳ್ಳಿಯ ರಾಜೇಶ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ದೊಡ್ಡರಾಯಪ್ಪನಹಳ್ಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ದೊಡ್ಡರಾಯಪ್ಪನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಧುಮೇಹ, ರಕ್ತದಒತ್ತಡ, ದೃಷ್ಟಿದೋಷ ಮತ್ತು ದಂತ ಸಂಬಂಧಿತ ತಪಾಸಣೆಗಳನ್ನು ನಡೆಸಿ ವೈದ್ಯಕೀಯ ಸಲಹೆ ಹಾಗೂ ಔಷಧಗಳನ್ನು ವಿತರಿಸಲಾಯಿತು.ಕೇಂದ್ರದ ಹಿರಿಯವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಹನುಮಂತರಾಯ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ವ್ಯವಸಾಯದೊಂದಿಗೆ ತಮ್ಮಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಇತ್ತೀಚಿನ ಆಹಾರ ಕ್ರಮಗಳಿಂದ ಮಧ್ಯವಯಸ್ಸಿನಲ್ಲಿಯೇ ಮಧುಮೇಹ ಮತ್ತು ರಕ್ತದೊತ್ತಡಗಳಿಗೆ ತುತ್ತಾಗುತ್ತಿದ್ದಾರೆ. ಆಗಿಂದಾಗ್ಗೆ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಆರಂಭದಲ್ಲಿಯೇ ರೋಗಗಳನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆಯೆಂದು ತಿಳಿಸಿದರು.
ದಂತವೈದ್ಯೆ ಡಾ. ಎಲ್. ಅಂಬಿಕಾ ಮಾತನಾಡಿ, ಹಲ್ಲಿನ ಸಂಬಂಧಿತ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದರೆ ದಂತಕುಳಿ ಮುಂತಾದ ತೀವ್ರವಾದ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆಯೆಂದು ತಿಳಿಸಿದರು.ನೇತ್ರ ತಜ್ಞರಾದ ಡಾ. ರಾಜೇಶ್ ಮಾತನಾಡಿ, ಮಧುಮೇಹ ಸಮಸ್ಯೆಯಿಂದ ದೃಷ್ಟಿದೋಷ ಉಂಟಾಗುತ್ತದೆ ಮತ್ತು ಗ್ಲುಕೋಮಾದಂತಹ ಶಾಶ್ವತ ದೃಷ್ಟಿದೋಷ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಧುಮೇಹ ನಿಯಂತ್ರಣದಲ್ಲಿಡಬೇಕು ಎಂದು ತಿಳಿಸಿದರು.
ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ಡಾ.ಸಾಗರ್, ಎಸ್. ಪೂಜಾರ್ ಕೋವಿಡ್‌ನ ರೂಪಾಂತರ ತಳಿ ಜೆ.ಎನ್-೧ರ ನಿಯಂತ್ರಣದ ಮುಂಜಾಗ್ರತಾ ಕ್ರಮವನ್ನು ವಿವರಿಸಿದರು.ದೊಡ್ಡರಾಯಪ್ಪನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 90 ರೈತರು, ರೈತ ಮಹಿಳೆಯರು ಮತ್ತು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿ.ಎಸ್ಸಿ. (ಕೃಷಿ) ವಿದ್ಯಾರ್ಥಿಗಳು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದರು.
26ಕೆಡಿಬಿಪಿ11-ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.