ಸಾರಾಂಶ
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ನಿಯಮಿತ ಆರೋಗ್ಯ ತಪಾಸಣೆಗಳು ಆರಂಭಿಕ ಹಂತದಲ್ಲಿ ರೋಗವನ್ನು ಕಂಡುಹಿಡಿಯಲು ಮತ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ ಮಾತನಾಡಿದರು.ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ನಗರದ ಗಾಂಧಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಕಬ್ಬು ಕಟಾವು ತಂಡಗಳಿಗಾಗಿ ಆಯೋಜಿಸಿದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ತಪಾಸಣೆಗಳು ವೈದ್ಯರಿಗೆ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕೆಂಬುವುದರ ಬಗ್ಗೆ ಉತ್ತಮ ತಿಳುವಳಿಕೆ ನೀಡುತ್ತದೆ. ಜತೆಗೆ ರೋಗಿಯ ದೇಹ ಮತ್ತು ಅದರ ಚಯಾಪಚಯ ಕ್ರಿಯೆಯ ಬಗ್ಗೆ ಉತ್ತಮ ತಿಳುವಳಿಕೆ ನೀಡುತ್ತದೆ. ಇದರ ಆಧಾರದ ಮೇಲೆ ವೈದ್ಯರು ರೋಗಿಗೆ ಔಷಧಿ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಲು ಸಲಹೆ ನೀಡಲು ಅನುಕೂಲವಾಗುತ್ತದೆ ಎಂದರು.ಉಪಾಧ್ಯಕ್ಷ ಪವನಕುಮಾರ ಪಾಟೀಲ ಮಾತನಾಡಿ, ಮೊದಲೆಲ್ಲ ವೈದ್ಯರು ತಮ್ಮ ರೋಗಿಗಳಿಗೆ ಪ್ರತಿವರ್ಷಕ್ಕೆ ಒಂದು ಬಾರಿ ತಮ್ಮ ಆರೋಗ್ಯವನ್ನು ಪರೀಕ್ಷಿಸಲು ಸಲಹೆ ನೀಡುತ್ತಿದ್ದರು. ಆದರೆ, ಕೊರೋನಾ ಸೋಂಕು ಪ್ರತಿಯೊಬ್ಬರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನುಂಟು ಮಾಡಿದೆ. ಆರೋಗ್ಯದ ತಪಾಸಣೆ ಈಗ ಆದ್ಯತೆ ಪಡಿದಿದೆ. ಬಡವರಿಗೆ ಇದು ಮೇಲಿಂದ ಮೇಲೆ ಮಾಡುವುದು ಕಷ್ಟಕರ ಮತ್ತು ದುಬಾರಿಯಾಗಿದೆ. ಹಾಗಾಗಿ ನಾವು ಕಾರ್ಖಾನೆಯ ಆವರಣದಲ್ಲಿ ನೆಲೆಸಿದ ಕಬ್ಬು ಕಟಾವು ತಂಡಗಳಿಗೆ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.ಗಾಂಧಿ ಆಸ್ಪತ್ರೆಯ ಎನ್‌ಸಿಡಿ ಸಲಹೆಗಾರ ಆನಂದ ನಾವಿ, ಲ್ಯಾಬ್ ಟೆಕ್ನಿಷಿಯನ್ ಶ್ರೀಕಾಂತ್.ಎಸ್, ನಾಗರಾಜು, ಪುಂಡಲೀಕ್ ಮತ್ತು ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ನಿರ್ದೇಶಕ ಪ್ರಕಾಶ ಶಿಂಧೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವಿ, ಕಾರ್ಯಾಲಯ ಅಕ್ಷಕ ಗಜಾನನ ರಾಮನಕಟ್ಟಿ, ಕಾರ್ಮಿಕ ಅಧಿಕಾರಿ ಸಾಗರ ಜಾಧವ, ಸುರಕ್ಷತಾ ಅಧಿಕಾರಿ ಅಕ್ಷಯ ಪಾಟೀಲ, ಸಹಾಯಕ ಆರೋಗ್ಯ ಮತ್ತು ಸುರಕ್ಷತಾ ಅಧಿಕಾರಿ ರೋಹಿತ್ ಪರೀಟ, ಅಭಿಜಿತ್ ಸಾಳುಂಖೆ, ಬಾಳಾಸಾಹೇಬ ಪಾಟೀಲ ಸೇರಿದಂತೆ ಕಾರ್ಮಿಕರು, ರೈತರು ಉಪಸ್ಥಿತರಿದ್ದರು.