ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಕಟಿಬದ್ಧ: ಡಾ. ಶಂಕರ ನಾಯ್ಕ

| Published : Feb 11 2024, 01:47 AM IST

ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಕಟಿಬದ್ಧ: ಡಾ. ಶಂಕರ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮವನ್ನು ಪತ್ರಿಕೆಗಳು ಮಾಹಿತಿ ನೀಡುವ ಕೊಂಡಿಗಳಂತೆ ಕರ್ತವ್ಯ ನಿರ್ವಹಿಸುತ್ತವೆ. ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಸುಲಭವಾಗಿ ದೊರೆಯಬೇಕು ಎಂದು ಡಾ. ಶಂಕರ ನಾಯ್ಕ ಹೇಳಿದರು. ಹೊಸಪೇಟೆಯಲ್ಲಿ ನಡೆದ ಮಾಧ್ಯಮ ಪ್ರತಿನಿಧಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹೊಸಪೇಟೆ: ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಕಟಿಬದ್ಧವಾಗಿದ್ದು, ಈಗಾಗಲೇ ಜಿಲ್ಲಾಸ್ಪತ್ರೆ ಕಟ್ಟಡ ಕೂಡ ನಿರ್ಮಾಣ ಹಂತದಲ್ಲಿದೆ. ಜನರ ಆರೋಗ್ಯ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಲ್‌.ಆರ್. ಶಂಕರ ನಾಯ್ಕ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಕಾರ್ಯಕ್ರಮ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿಜಯನಗರ ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲೂ ಕ್ಷಯ, ಕುಷ್ಠರೋಗ ನಿರ್ಮೂಲನೆ, ಸೊಳ್ಳೆಗಳ ನಿಯಂತ್ರಣ, ರೇಬಿಸ್‌ ಕಾಯಿಲೆ ಜಾಗೃತಿ, ಡೆಂಘೀ, ಮಲೇರಿಯಾ ಜಾಗೃತಿ ಮತ್ತು ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಚಿಕಿತ್ಸೆ ಒದಗಿಸಲುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದರು.

250 ಹಾಸಿಗೆಯ ವಿಜಯನಗರ ಜಿಲ್ಲಾಸ್ಪತ್ರೆ ನಿರ್ಮಿಸಲಾಗುತ್ತಿದೆ. ಇನ್ನೂ 150 ಹಾಸಿಗೆಗಳನ್ನು ಹೆಚ್ಚಿಸುವ ಪ್ರಸ್ತಾವನೆ ಕೂಡ ಇದೆ. ಕೆಎಂಇಆರ್‌ಸಿಯಲ್ಲಿ ಅನುದಾನ ಪಡೆಯಲು ಪ್ರಯತ್ನಿಸಲಾಗಿದೆ. 60 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿಸಲು ಕೂಡ ಪ್ರಯತ್ನಿಸಲಾಗಿದೆ. ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಘಟಕ ತೆರೆಯಲು ಕೂಡ ಕ್ರಮವಹಿಸಲಾಗಿದೆ ಎಂದರು.

ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮ: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಇವೆರಡು ಆಸ್ಪತ್ರೆಗಳ ಆಡಳಿತಾಧಿಕಾರಿಗಳಿಗೆ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಬಾಣಂತಿಯರು, ಗರ್ಭಿಣಿಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮವಹಿಸಲು ಸೂಚಿಸಲಾಗಿದೆ. ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ದಿಶೆಯಲ್ಲಿ ಕ್ರಮವಹಿಸಲಾಗಿದೆ ಎಂದರು.

ಪತ್ರಿಕೆಗಳ ಪಾತ್ರ ಹಿರಿದು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮವನ್ನು ಪತ್ರಿಕೆಗಳು ಮಾಹಿತಿ ನೀಡುವ ಕೊಂಡಿಗಳಂತೆ ಕರ್ತವ್ಯ ನಿರ್ವಹಿಸುತ್ತವೆ. ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಸುಲಭವಾಗಿ ದೊರೆಯಬೇಕು. ಇಂತಹ ಮಾಹಿತಿ ನೀಡುವ ಕಾರ್ಯಕ್ರಮಗಳು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಯಬೇಕು. ಪಲ್ಸ್ ಪೋಲಿಯೋ ಲಸಿಕೆಯನ್ನು ಯಶಸ್ವಿಯಾಗಿ ನೀಡಿ 2014ರಲ್ಲಿ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಲಾಗಿದೆ. 2025ಕ್ಕೆ ದೇಶವನ್ನು ಕುಷ್ಠರೋಗ ಮುಕ್ತ ಮಾಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಡಿಟಿಒ ಡಾ. ಜಗದೀಶ್ ಪಾಟ್ನೆ ಮಾತನಾಡಿ, ಕ್ಷಯ ರೋಗದ ಲಕ್ಷಣಗಳು ಕಂಡುಬರುವ ಪ್ರತಿಯೊಬ್ಬರೂ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಸಮುದಾಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಷಯರೋಗ ಪತ್ತೆಯಾದ ವ್ಯಕ್ತಿಗೆ ಆರು ತಿಂಗಳು ಉಚಿತ ಚಿಕಿತ್ಸೆ ನೀಡಿ ರೋಗ ಗುಣಪಡಿಸಲಾಗುವುದು ಎಂದರು.

ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖ ನಾಯ್ಕ ಮಾತನಾಡಿ, ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ನೀರಿನಿಂದ ಸತತ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ. 50ರಷ್ಟು ರೇಬಿಸ್ ಬರದಂತೆ ತಡೆಗಟ್ಟಲು ಸಾಧ್ಯ. ರೇಬಿಸ್ ರೋಗ ನಿರೋಧಕ ಲಸಿಕೆಯನ್ನು 0, 3, 7, 14 ಮತ್ತು 28ನೇ ದಿನದಂದು ತಪ್ಪದೇ ಪಡೆಯುವ ಮೂಲಕ ಭಯಾನಕ ಕಾಯಿಲೆಯಿಂದ ರಕ್ಷಣೆ ಪಡೆಯಬೇಕು ಎಂದರು.

ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಧಿಕಾ ಮಾತನಾಡಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕದ ಯೋಜನೆಯಲ್ಲಿ ಒಟ್ಟು 1650 ಕಾಯಿಲೆಗಳಿಗೆ ಬಿಪಿಎಲ್ ಕಾರ್ಡದಾರರಿಗೆ ₹5 ಲಕ್ಷ ಹಾಗೂ ಎಪಿಎಲ್ ಕಾರ್ಡದಾರರಿಗೆ ₹1.50 ಲಕ್ಷ ವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಈ ಯೋಜನೆಯಲ್ಲಿ ಕೋವಿಡ್‌ಅನ್ನು ಸೇರಿಸಲಾಗಿದೆ ಎಂದರು.

ಆರ್‌ಸಿಎಚ್‌ ಡಾ. ಜಂಬಯ್ಯ ನಾಯಕ, ವೈದ್ಯರಾದ ಡಾ. ಕಮಲಮ್ಮ, ಡಾ. ಸ್ವಪ್ನಾ, ಡಾ. ಗುರುಪ್ರಸಾದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡಮನಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ ಮತ್ತಿತರರಿದ್ದರು.