ಆರೋಗ್ಯ, ಶೈಕ್ಷಣಿಕ ಅಭಿವೃದ್ಧಿ: ಜಾಲಪ್ಪ ಆಶಯಗಳಿಗೆ ಬದ್ಧ
KannadaprabhaNewsNetwork | Published : Oct 17 2023, 12:30 AM IST
ಆರೋಗ್ಯ, ಶೈಕ್ಷಣಿಕ ಅಭಿವೃದ್ಧಿ: ಜಾಲಪ್ಪ ಆಶಯಗಳಿಗೆ ಬದ್ಧ
ಸಾರಾಂಶ
ದೊಡ್ಡಬಳ್ಳಾಪುರ: ಹಿಂದುಳಿದ ವರ್ಗಗಳ ಅಭ್ಯುದಯ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡಿದ್ದ ಹಿರಿಯ ಮುತ್ಸದ್ದಿ ಆರ್.ಎಲ್.ಜಾಲಪ್ಪ ಅವರ ಆಶಯಗಳ ಸಾಕಾರಕ್ಕೆ ಒತ್ತು ನೀಡಿ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ ಹೇಳಿದರು.
ದೊಡ್ಡಬಳ್ಳಾಪುರ: ಹಿಂದುಳಿದ ವರ್ಗಗಳ ಅಭ್ಯುದಯ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡಿದ್ದ ಹಿರಿಯ ಮುತ್ಸದ್ದಿ ಆರ್.ಎಲ್.ಜಾಲಪ್ಪ ಅವರ ಆಶಯಗಳ ಸಾಕಾರಕ್ಕೆ ಒತ್ತು ನೀಡಿ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ ಹೇಳಿದರು. ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಆರ್.ಎಲ್.ಜಾಲಪ್ಪ ಅವರ 98ನೇ ಜನ್ಮದಿನಾಚರಣೆ ಅಂಗವಾಗಿ ಆರ್‌ಎಲ್‌ಜೆಐಟಿ ಕ್ಯಾಂಪಸ್‌ನ ಕಲಾ ಮಂದಿರದಲ್ಲಿ ಸೋಮವಾರ ನಡೆದ ಬೃಹತ್ ಆರೊಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಕಳೆದ 5 ದಶಕಗಳಿಂದ ವಿವಿಧ ಹಂತಗಳ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಜಾಲಪ್ಪ ಪರಿಸರ, ಶಿಕ್ಷಣ, ಗ್ರಾಮೀಣಾಭಿವೃದ್ದಿ, ಸಹಕಾರ ಸೇರಿದಂತೆ ವಿವಿಧ ವಲಯಗಳಲ್ಲಿ ಅನೇಕ ಸೇವಾ ಕಾರ್‍ಯಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಹೊಂದಿದ್ದಾರೆ. ಅವರು ಸ್ಥಾಪಿಸಿರುವ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಹಿಂದುಳಿದ ವರ್ಗದ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮಹತ್ವದ ಕೆಲಸ ಮಾಡುತ್ತಿದೆ. ಅವರ ಆಶಯಗಳಿಗೆ ಪೂರಕವಾಗಿ ಆರೋಗ್ಯ ಮತ್ತು ಶಿಕ್ಷಣ ಸೇವೆ ಮುಂದುವರೆಯುತ್ತಿದೆ ಎಂದರು. ಸರ್ಕಾರದಿಂದ ಆಚರಣೆಗೆ ಕ್ರಮ: ಶಾಸಕ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಜಾಲಪ್ಪನವರು ಶೈಕ್ಷಣಿಕವಾಗಿ ಸಮಾಜವನ್ನು ಸದೃಢವಾಗಿ ಕಟ್ಟುವ ಉದ್ದೇಶದಿಂದ ಅನೇಕ ವಿದ್ಯಾ ಸಂಸ್ಥೆಗಳನ್ನು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯಡಿ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ಸುಶಿಕ್ಷಿತ ಸಮುದಾಯದಿಂದ ಮಾತ್ರ ದೇಶದ ಭವಿಷ್ಯ ಬಲಗೊಳ್ಳಲು ಸಾಧ್ಯ ಎಂಬ ಸಂದೇಶವನ್ನು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ವತಿಯಿಂದ ಜಾಲಪ್ಪನವರ ಜನ್ಮದಿನಾಚರಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ನೇರ ನಡೆಯ ರಾಜಕಾರಣಿ ಜಾಲಪ್ಪ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಜಾಲಪ್ಪ ಅವರ ಒತ್ತಾಸೆಯಿಂದ ರಾಜ್ಯದಲ್ಲಿ ಜಾರಿಗೆ ಬಂದ ಹಲವು ಯೋಜನೆಗಳು ಇಂದಿಗೂ ಜನಸ್ನೇಹಿಯಾಗಿವೆ. ದೊಡ್ಡಬಳ್ಳಾಪುರದ ಅಪರೆಲ್ ಪಾರ್ಕ್ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ. ಮುಖ್ಯವಾಗಿ ಮಹಿಳಾ ಉದ್ಯೋಗಿಗಳಿಗೆ ಆಸರೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ ಅವರು, ನೇರ, ನಿಷ್ಠುರ ನಡೆಯಿಂದ ಖ್ಯಾತಿ ಗಳಿಸಿದರು ಎಂದರು. ದೂರಗಾಮಿ ಚಿಂತನೆಯ ವ್ಯಕ್ತಿತ್ವ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್ ಮಾತನಾಡಿ, ದೂರಗಾಮಿ ಚಿಂತನೆಗಳನ್ನು ಹೊಂದಿರುವ ವ್ಯಕ್ತಿತ್ವಗಳು ಇಂದಿನ ರಾಜಕಾರಣಕ್ಕೆ ಅಗತ್ಯವಾಗಿದೆ. ಭವಿಷ್ಯದ ಹಿತದೃಷ್ಟಿಯಿಂದ ಜಾರಿಗೊಳ್ಳುವ ಯೋಜನೆಗಳು ಜನರ ಆಶೋತ್ತರಗಳಿಗೆ ಪೂರಕವಾಗಿರಬೇಕು. ಆ ನಿಟ್ಟಿನಲ್ಲಿ ಜಾಲಪ್ಪನವರ ಚಿಂತನೆಗಳು ಅನುಕರಣೀಯ ಎಂದರು. ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಪಿ.ರವಿ, ನಗರಸಭೆ ಪೌರಾಯುಕ್ತ ಪರಮೇಶ್, ಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಟ್ರಸ್ಟಿಗಳಾದ ಮೃಣಾಲಿನಿ, ಎಚ್.ಎಸ್.ಪ್ರಕಾಶ್, ದೇವರಾಜ ಅರಸ್ ಉನ್ನತ ಶಿಕ್ಷಣ ಸಂಸ್ಥೆಯ ಉಪಕುಲಪತಿ ಡಾ.ಡಿವಿಎಲ್‌ಎನ್ ಪ್ರಸಾದ್, ಆರ್.ಎಲ್.ಜಾಲಪ್ಪ ವೈದ್ಯಕೀಯ ಕಾಲೇಜು ಅಧೀಕ್ಷಕ ಡಾ.ಕೃಷ್ಣಪ್ಪ, ಸಮುದಾಯ ವೈದ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಪ್ರಸನ್ನಕುಮಾರ್, ಪ್ರಾಂಶುಪಾಲ ಡಾ.ಪ್ರಭಾಕರ್, ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಬಿ.ಎಸ್.ನಾಗರಾಜ್, ಜಿಲ್ಲಾ ಮಧುಮೇಹ ಸಂಚಾಲಕ ವಿಜಯಕುಮಾರ್, ಜಾಗತಿಕ ಸೇವಾ ತಂಡದ ಸದಸ್ಯ ರವಿಚಂದ್ರನ್, ಚಂದ್ರಶೇಖರ್, ರಾಧಾಕೃಷ್ಣ ಹೆಗಡೆ, ಪ್ರಾಂತೀಯ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ವಲಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ನಖೀರ್ ರಝಾ, ಉಪಾಧ್ಯಕ್ಷರಾದ ಜೆ.ಆರ್.ರಾಕೇಶ್, ಮುನಿರಾಮೇಗೌಡ, ಕೆ.ಆರ್.ರವಿಕಿರಣ್, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಬಾಕ್ಸ್............... 1 ಸಾವಿರ ಜನರಿಗೆ ಆರೋಗ್ಯ ತಪಾಸಣೆ: ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸಮುದಾಯ ವೈದ್ಯಶಾಸ್ತ್ರ ವಿಭಾಗ, ಶ್ರೀ ದೇವರಾಜ ಅರಸ್ ವೈದ್ಯಕೀಯ ಮಹಾವಿದ್ಯಾಲಯ, ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್, ಲಯನ್ಸ್ ಕ್ಲಬ್ ಆಫ್ ತೊಂಡೇಬಾವಿ, ಲಯನ್ಸ್ ಕ್ಲಬ್ ಆಫ್ ಅಲ್ಲೀಪುರ ಮತ್ತು ಅಕ್ಷಯ ಲಿಯೋ ಕ್ಲಬ್ ಆಶ್ರಯದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರದಲ್ಲಿ ಹೃದ್ರೋಗ, ಶ್ವಾಸಕೋಶ, ಮೂತ್ರಪಿಂಡ ಸಮಸ್ಯೆ, ಮೂಳೆ-ಕೀಲು, ಕಿವಿ-ಗಂಟಲು, ಕಣ್ಣು, ದಂತ, ಸ್ತ್ರೀ ರೋಗ, ಮಕ್ಕಳ ಆರೋಗ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಜನರಿಗೆ ತಪಾಸಣೆ ನಡೆಸಿ ವೈದ್ಯಕೀಯ ಸಲಹೆ, ಔಷಧ ವಿತರಣೆ ನಡೆಯಿತು. 16ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಆರ್.ಎಲ್.ಜಾಲಪ್ಪ ಅವರ 98ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಬೃಹತ್ ಆರೋಗ್ಯ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ ಉದ್ಘಾಟಿಸಿದರು. 16ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಯಿತು.