ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಈಗಾಗಲೇ ಶಿಕ್ಷಣ ರಂಗದಲ್ಲಿನ ಕೊರತೆಗಳನ್ನು ನೀಗಿಸಲು ಅಕ್ಷರ ಆವಿಷ್ಕಾರ ಹೆಸರಲ್ಲಿ ಯೋಜನೆ ರೂಪಿಸಿ ವಾರ್ಷಿಕ 750 ಕೋಟಿ ರು ಶಿಕ್ಷಣ ರಂಗಕ್ಕೇ ವೆಚ್ಚ ಮಾಡಲು ಮುಂದಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಇದೀಗ ಕಲ್ಯಾಣದ ಜಿಲ್ಲೆಗಳಲ್ಲಿನ ಆರೋಗ್ಯ ಸೇವೆಗಳಲ್ಲಿನ ಅಸಮಾನತೆ ನೀಗಿಸಲು ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, ಹೃದ್ರೋಗಿಗಳಿಗೇ ಪ್ರತ್ಯೇಕ ಹಾರ್ಟ್ ಲೈನ್ ಆ್ಯಂಬುಲೆನ್ಸ್ ಸೇವೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದೆ.ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಇಂದಿಲ್ಲಿ ಮಂಡಳಿಯ ಆಡಳಿತ ಕೇಂದ್ರ ಅಭಿವೃದ್ಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ವಾರ್ಷಿಕ 250 ಕೋಟಿ ರು. ವೆಚ್ಚದ ಆರೋಗ್ಯ ಆವಿಷ್ಕಾರ ಯೋಜನೆ ಬಜೆಟ್‌ನಲ್ಲಿ ಘೋಷಣೆಯಾಗಿದೆ, ಸಂಪುಟದಲ್ಲಿಯೂ ಅನುಮೋದನೆಗೊಳಪಟ್ಟಿದೆ. ಇದರಿಂದಾಗಿ ಆರೋಗ್ಯ ರಂಗದಲ್ಲಿನ ಅನೇಕ ಅಸಮಾನತೆಗಳನ್ನು ನಾವಿಲ್ಲಿ ಮೆಟ್ಟಿ ನಿಲ್ಲಲು ಇದು ಸುವರ್ಣ ಅವಕಾಶವೆಂದರು.
ಆರೋಗ್ಯ ಆವಿಷ್ಕಾರ ಯೋಜನೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಪ್ರತಿ ಪಿಎಚ್‌ಸಿಗೆ 4. 90 ಕೋಟಿ ರು. ನಂತೆ 46 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಪಿಎಚ್‌ಸಿಗೆ ತಗಲುವ ವೆಚ್ಚದಲ್ಲಿ ತಲಾ 2 ಕೋಟಿ ರು ಕೆಕೆಆರ್‌ಡಿಬಿಯ ಪಾಲು, ಉಳಿದಂತೆ 3 ಕೋಟಿ ರು. ಎನ್‌ಎಚ್‌ಎಂ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಪಾಲು ಇರಲಿದೆ ಎಂದು ಡಾ.ಅಜಯಸಿಂಗ್ ಹೇಳಿದರು.ಒಟ್ಟು 46 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 33 ಕೆ.ಕೆ.ಆರ್.ಡಿ.ಬಿ ವತಿಯಿಂದ ಹಾಗೂ ಉಳಿದ 13 ಕೇಂದ್ರಗಳಿಗೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಖನಿಜ ನಿಧಿ ಬಳಸಿಕೊಂಡು ನಿರ್ಮಿಸಲಾಗುತ್ತಿದೆ. 3 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಮುಂದಿನ ಹಣಕಾಸು ವರ್ಷದಲ್ಲಿ ಪುನಃ 32 ಪಿ.ಎಚ್.ಸಿ. ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಡಾ.ಅಜಯಸಿಂಗ್ ನುಡಿದರು.ಕೆಕೆಆರ್‌ಡಿಬಿ ಆರೋಗ್ಯ ರಂಗದಲ್ಲಿನ ಸವಲತ್ತು ನಿರ್ಮಾಣಕ್ಕೆ ಮುಂದಾಗಲು ಇರುವ ಕಾರಣಗಳನ್ನು ಅಂಕಿ ಸಂಖ್ಯೆ ಸಮೇತ ವಿವರಿಸಿದ ಅಜಯ್ ಸಿಂಗ್, ಕಲಬುರಗಿ ವಿಭಾಗದ ಗ್ರಾಮೀಣ ಜನಸಂಖ್ಯೆ 1 ಕೋಟಿ ಇದ್ದರೂ ಇಲ್ಲಿರೋದು ಪ್ರತಿ 35 ಸಾವಿರ ಜನಸಂಖ್ಯೆಗೆ 1 ಪಿಎಚ್‌ಸಿ, ಅದೇ ಬೆಳಗಾವಿಯಲ್ಲಿ ಪ್ರತಿ 26 ಸಾವಿರಕ್ಕೆ 1 ಪಿಎಚ್‌ಸಿ, ಬೆಂಗಳೂರು ಹಾಗೂ ಮೈಸೂರಲ್ಲಿ ಪ್ರತಿ 14 ಸಾವಿರ ಜನಸಂಖ್ಯೆಗೆ 1 ಪಿಎಚ್‌ಸಿ ಇವೆ. ಹೀಗಾಗಿ ಈ ಅಜಗಜಾಂತರ ಬೆಸೆಯೋದು ಮಂಡಳಿಯ ಆರೋಗ್ಯ ಆವಿಷ್ಕಾರ ಯೋಜನೆಯ ಗುರಿ. ಕೆಕೆಆರ್‌ಡಿಬಿ ಮೊದಲ 3 ವರ್ಷ ಶೇ.50ರಷ್ಟು ವೆಚ್ಚದ ಅನುದಾನ ಭರಿಸಲಿದೆ ಎಂದರು.
ಹೃದ್ರೋಗಿಗಳಿಗೆ ಹಾರ್ಟ್ ಲೈನ್ ಆ್ಯಂಬುಲೆನ್ಸ್ ಸೇವೆ:ಹೆಚ್ಚುತ್ತಿರುವ ಹೃದಯ ಸಂಬಂಧಿ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಕೆಕೆಆರ್‌ಡಿಬಿ ತನ್ನ ಆರೋಗ್ಯ ಆವಿಷ್ಕಾರದಲ್ಲಿ ಗ್ರಾಮೀಣ ಹೃದ್ರೋಗಿಗಳು ಸಮಸ್ಯೆ ಕಾಡಿದಾಗ ಗೋಲ್ಡನ್ ಅವರ್‌ನಲ್ಲೇ ಆಸ್ಪತ್ರೆ ಸೇರುವಂತಾಗಲು ಹಾರ್ಟ್ ಲೈನ್ ಹೆಸರಿನಲ್ಲಿ 9 ಆ್ಯಂಬುಲೆನ್ಸ್‌ಗಳ ಸೇವೆ ಆರಂಭಿಸಲು ಕೆಕೆಆರ್‌ಡಿಬಿ ಮುಂದಾಗಿದೆ. ಈಗಾಗಲೇ ಆ್ಯಂಬುಲೆನ್ಸ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಶುರುವಾಗಿದೆ.
ಇದಲ್ಲದೆ ಪಿಎಚ್‌ಸಿಗಳಲ್ಲಿ ಹಬ್ ಆಂಡ್ ಸ್ಪೋಕ್ ಮಾದರಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದಲ್ಲಿ ಹೃದ್ರೋಗಿಗೆ ಗೋಲ್ಡನ್ ಅವರ್‌ನಲ್ಲೇ ಚಿಕಿತ್ಸೆ ಲಭ್ಯವಾಗುವಂತಹ ಆ್ಯಂಬುಲೆನ್ಸ್ ಸೇವೆ ಇದಾಗಲಿದೆ. ಈ ನಿಟ್ಟಿನಲ್ಲಿ ಜನರಿಗೆ ಅನುಕೂಲ ಆಗುವಂತೆ ಮುಂದಿನ ಎರಡು ತಿಂಗಳಲ್ಲಿ ಹಾರ್ಟ್ ಲೈನ್ ಆಂಬ್ಯುಲೆನ್ಸ್ ಬಳಕೆಗೆ ಪೂರಕವಾಗಿ ಕೆ.ಕೆ.ಆರ್.ಡಿ.ಬಿ. ವತಿಯಿಂದ ಆ್ಯಪ್ ಅಭಿವೃದ್ಧಿಪಡಿಸಲಾಗುವುದು, ಇದೆಲ್ಲವೂ ಮಂದಿನ 2 ತಿಂಗಳಲ್ಲಿ ಜನತೆಗೆ ಅರ್ಪಣೆಯಾಗಲಿದೆ ಎಂದರು.ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿ ಇನ್ನೂ 17 ಸಮುದಾಯ ಆರೋಗ್ಯ ಕೇಂದ್ರಗಳ ಅಗತ್ಯವಿರೋದು ಗಮನಸಿದ್ದೇವೆ, ಪ್ರತಿ ಆರೋಗ್ಯ ಕೇಂದ್ರಕ್ಕೆ 14 ಕೋಟಿ ರು. ಅಗತ್ಯವಿದೆ. ಮುಂದಿನ ಬಜೆಟ್‌ನಲ್ಲಿ ಈ ಯೋಜನೆಯೂ ಕಾರ್ಯಗತವಾಗುವಂತೆ ಮಾಡುತ್ತೇವೆಂದರು.
ಆರೋಗ್ಯ ಸೌಧ ನಿರ್ಮಾಣ:ಪ್ರಸ್ತುತ ಜಯದೇವ ಹೃದ್ರೋಗ ಸಂಶೋಧನಾ ಕೇಂದ್ರದ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿರುವ ಸ್ಥಳದ ಹಿಂಭಾಗದಲ್ಲಿ ಆರೋಗ್ಯ ಇಲಾಖೆಯ ಎಲ್ಲ ಕಟ್ಟಡಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆ ತಲೆ ಎತ್ತಲಿರುವ ಆರೋಗ್ಯ ಸೌಧಕ್ಕೆ ಕೆಕೆಆರ್ಡಿಬಿ 10 ಕೋಟಿ ಹಾಗೂ ಆರೋಗ್ಯ ಇಲಾಖೆಯ ರು. 18 ಕೋಟಿ ಸೇರಿಸಿ ಒಟ್ಟು 18 ಕೋಟಿ ಅನುದಾನ ಲಭ್ಯವಾಗಗಲಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರ ಸಮಗ್ರ ಆರೋಗ್ಯದ ದೃಷ್ಟಿಯಿಂದ ರು. 2 ಕೋಟಿ ಖರ್ಚು ಮಾಡಿ ಮಂಡಳಿ ವತಿಯಿಂದ ಮುಟ್ಟಿನ ಕಪ್ ಗಳನ್ನು ಖರೀದಿಸಲಾಗುತ್ತಿದೆ. ಅಲ್ಲದೆ, ಮಹಿಳೆಯರಿಗೆ ಗರ್ಭ ಕಂಠದ (ಸರ್ವೈಕಲ್) ಕ್ಯಾನ್ಸರ್ ಕಾಡದಂತೆ ಮಂಡಳಿಯಿಂದ ಲಸಿಕೆ ಒದಗಿಸುವ ಚಿಂತನೆ ನಡೆದಿದೆ ಎಂದರು. ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಸುಂದರೇಶ ಬಾಬು, ಉಪ ಕಾರ್ಯದರ್ಶಿ ಪ್ರಮೀಳಾ ಕಡೇಚೂರ್, ಮಲ್ಲಿಕಾರ್ಜುನ ರೆಡ್ಡಿ ಇದ್ದರು.