ಹುಬ್ಬಳ್ಳಿ: ಸಮಾಜದಲ್ಲಿ ಸಾಕಷ್ಟು ವಿರೋಧಗಳನ್ನು ಎದುರಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಾರೆ. ಪತ್ರಕರ್ತರಿಗೆ ಸಾಕಷ್ಟು ಸೌಲಭ್ಯಗಳಿಲ್ಲ. ಶೀಘ್ರದಲ್ಲಿಯೇ ಅವರಿಗೆ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಆರೋಗ್ಯ ವಿಮೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು. ಮಹಾನಗರ ಪಾಲಿಕೆ ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸದಾ ಬದ್ಧವಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಇಲ್ಲಿನ ಮೂರುಸಾವಿರ ಮಠ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳೆಯರಿಗೆ ರಂಗೋಲಿ ಹಾಗೂ ಅಡುಗೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳಾ ದಿನಾಚರಣೆ ಕಾರ್ಯಕ್ರಮ ಹೊಸತನ ಒಳಗೊಂಡಿರಬೇಕು. ಎಲ್ಲರೂ ಅಚ್ಚುಕಟ್ಟಾಗಿ ರಂಗೋಲಿ ಹಾಕಿದ್ದಾರೆ. ತಮ್ಮ ಮನೆ ಯಜಮಾನರ ಮೇಲಿನ ಪ್ರೀತಿ ಬಿಂಬುಸವ ರೀತಿ ರಂಗೋಲಿಗಳು ಮೂಡಿಬಂದಿವೆ. ಮಹಿಳೆಯರು ಸಾಕಷ್ಟು ಕೆಲಸಗಳನ್ನು ಮಾಡಿ, ಮಕ್ಕಳನ್ನು ಸಂಬಾಳಿಸಿ ಮನೆಯನ್ನು ನಿಭಾಯಿಸುತ್ತಾಳೆ. ಪತ್ರಕರ್ತರು ಸದಾ ಕಾರ್ಯನಿರತವಾಗಿರುವವರು. ಅವರನ್ನು ನಗುಮೊಗದಿಂದ ಮನೆಗೆ ಸ್ವಾಗತಿಸುವವರು ಮಹಿಳೆಯರು ಎಂದರು.

ಮಜೇಥಿಯಾ ಫೌಂಡೇಶನ್ ಅಧ್ಯಕ್ಷೆ ನಂದಿನಿ ಕಶ್ಯಪ ಮಾತನಾಡಿ, ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ, ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಮಹಿಳಾ ದಿನಾಚರಣೆ ಸಹಕಾರಿಯಾಗಿದೆ ಎಂದರು.

ಮಹಿಳೆಯರಲ್ಲಿ ಅಡಗಿರುವ ಪ್ರತಿಭೆ ಇಂದಿನ ರಂಗೋಲಿ ಹಾಗೂ ಅಡುಗೆ ಸ್ಪರ್ಧೆಯಲ್ಲಿ ಕಂಡುಬಂದಿದೆ. ಮಹಿಳಾ ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಪ್ರತಿದಿನವನ್ನು ಮಹಿಳಾ ದಿನವನ್ನಾಗಿ ಆಚರಿಸುವ ಮೂಲಕ ಮಹಿಳೆಯರನ್ನು ಗೌರವಯುತವಾಗಿ ಕಾಣಬೇಕು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ತನುಜಾ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ರಂಗೋಲಿ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ರಂಗೋಲಿ ಸ್ಪರ್ಧೆ ನಿರ್ಣಾಯಕರಾಗಿ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಗೋಟಿಯವರ, ಸವಿತಾ ಬೆಣಗಿ ಹಾಗೂ ಅಡುಗೆ ಸ್ಪರ್ಧೆ ನಿರ್ಣಾಯಕರಾಗಿ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕಾಶಿಬಾಯಿ ಕ್ಯಾಡಗಿ ಹಾಗೂ ಅಕ್ಕಮ್ಮ ಒಡಕಪ್ಪನವರ ಪಾಲ್ಗೊಂಡಿದ್ದರು.

ಸ್ಪರ್ಧೆ ವಿಜೇತರು

ರಂಗೋಲಿ ಸ್ಪರ್ಧೆಯಲ್ಲಿ ವೀಣಾ ಚಳಗೇರಿ (ಪ್ರಥಮ), ಅನುಷಾ ಕಮತರ (ದ್ವಿತೀಯ), ಚೈತನ್ಯಾದೇವಿ ಗುದಗಯ್ಯನವರಮಠ (ತೃತೀಯ), ವಿಜಯಲಕ್ಷ್ಮೀ ಪತ್ತಾರ, ವೀಣಾ ಕುಂಬಾರ, ರೋಹಿಣಿ ಅಂಗಡಿ, ಲಲಿತಾ ಹೂಗಾರ ಹಾಗೂ ರೂಪಾ ಗೊಂಬಿ ಸಮಾಧಾನಕರ ಬಹುಮಾನಗಳನ್ನು ಪಡೆದರು.

ಅಡುಗೆ ಸ್ಪರ್ಧೆಯಲ್ಲಿ ಶುಭಾ ಹೆಗಡೆ (ಪ್ರಥಮ), ಸುನಂದಾ ಮೆಣಸಿನಕಾಯಿ (ದ್ವಿತೀಯ), ಲಲಿತಾ ಹೂಗಾರ (ತೃತೀಯ), ರೂಪಾ ಕಣವಿ, ಸಾವಿತ್ರಿ ಶಿವಪೂರ, ವೇದಾ ಕಮತರ, ಮಂಜುಳಾ ಹುಲಕೊಪ್ಪ, ಕವಿತಾ ಬಡಿಗೇರ ಸಮಾಧಾನಕರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.