ಸಾರಾಂಶ
ಬಳ್ಳಾರಿ: ಆರೋಗ್ಯ ಎಂಬುದು ಬರೀ ದೇಹಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ. ಅದು ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಕ್ಕೆ ಸಂಬಂಧಿಸಿದ ವಿಷಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಪ್ರೊ.ಜಿ.ಶೋಭಾ ತಿಳಿಸಿದರು.ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಭರವಸೆ ಕೋಶ, ಜಂಟಿ ನಿರ್ದೇಶಕರ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಅಧ್ಯಾಪಕರಿಗಾಗಿ ಏರ್ಪಡಿಸಿದ್ದ "ಬದುಕನ್ನು ಸಂಭ್ರಮಿಸಿ " ಸಮಗ್ರ ಆರೋಗ್ಯ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ಎಲ್ಲ ಸಂಪತ್ತುಗಳಿಗಿಂತ ಅಮೂಲ್ಯವಾದ ಸಂಪತ್ತು ಎಂದರೆ ಆರೋಗ್ಯ. ಕಾಲೇಜಿಗೆ ಬರುವ ಮಕ್ಕಳು ನಿರಾಸೆ, ಹತಾಶೆ, ಕೀಳರಿಮೆ ಮುಂತಾದ ಕಾಯಿಲೆಗಳಿಗೆ ಒಳಗಾಗಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ನರಳುತ್ತಿರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಬದುಕನ್ನು ಸಂಭ್ರಮಿಸಲು ಅಣಿಗೊಳಿಸಬೇಕೆಂದರು.ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ದಾರಿ ತಪ್ಪಿಸುವುದುರಿಂದ ಅವುಗಳಿಂದ ಹೇಗೆ ಬಿಡುಗಡೆ ಹೊಂದಬೇಕು? ಅಲ್ಲಿ ಸಿಗುವ ಜ್ಞಾನವನ್ನಷ್ಟೇ ಸ್ವೀಕರಿಸಿ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದರ ಬಗೆಗೆ ಎಳೆ ಎಳೆಯಾಗಿ ಬಿಡಿಸಿಟ್ಟರು.
ಆಧುನಿಕ ಜೀವನ ಶೈಲಿಯಲ್ಲಿ ಒತ್ತಡದ ಜೀವನ ನಿವಾರಿಸಲು ಮಾನಸಿಕ ಆರೋಗ್ಯ ಬಹಳ ಮುಖ್ಯ. ಉತ್ತಮವಾದ ಸಾಮಾಜಿಕ ಸಂಬಂಧ ಮತ್ತು ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸುವುದರೆಡೆ ಆಲೋಚಿಸುವುದು ಈ ಹೊತ್ತಿನ ಅಗತ್ಯವಾಗಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕ ರಾಜೇಂದ್ರ ಸಿಂಧೆ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಕೆ. ಮಂಜುನಾಥ್ ರೆಡ್ಡಿ ವಹಿಸಿ ಮಾತನಾಡಿ, ಮಕ್ಕಳ ವಯೋ ಸಹಜ ಬೆಳವಣಿಗೆ, ಅರಳುವ ಪ್ರೀತಿ, ದುಡುಕು ಸ್ವಭಾವದೊಂದಿಗೆ ಪ್ರಜ್ಞಾವಂತಿಕೆಯನ್ನು ಹೇಗೆ ಬೆಳೆಸಿಕೊಳ್ಳಬೇಕು ಎನ್ನುವುದರ ಬಗ್ಗೆ ಮಕ್ಕಳಿಗೆ ನಾವೆಲ್ಲರೂ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಜಂಟಿ ನಿರ್ದೇಶಕರ ಕಚೇರಿಯ ವಿಶೇಷ ಅಧಿಕಾರಿಗಳಾದ ಡಾ.ಸೂರ್ಯಕಾಂತ್ ಉಮಾಪುರೆ ಹಾಗೂ ಡಾ.ಬಿ.ಸರೋಜಾ, ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗ ಭರವಸೆ ಕೋಶದ ಸಂಚಾಲಕ ಕಲ್ಯಾಣ ಬಸವ ವೇದಿಕೆಯಲ್ಲಿದ್ದರು.ಕಾರ್ಯಾಗಾರದಲ್ಲಿ ಕಾಲೇಜಿನ ಎಲ್ಲ ಅಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.