ಆರೋಗ್ಯವೆಂಬುದು ಕೇವಲ ಆಸ್ಪತ್ರೆಗಳಲ್ಲಿ ಸಿಗುವ ವಸ್ತುವಲ್ಲ. ಅದು ನಮ್ಮ ದಿನಚರಿಯಲ್ಲಿ ಅಡಗಿದೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಔಷಧರಹಿತ ಚಿಕಿತ್ಸಾ ಪದ್ಧತಿಯಾದ ಪ್ರಕೃತಿ ಚಿಕಿತ್ಸೆ ಮಹತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ನಿಸರ್ಗವೇ ಶ್ರೇಷ್ಠ ವೈದ್ಯ ಎಂಬುದು ಪ್ರಕೃತಿ ಚಿಕಿತ್ಸೆಯ ಮೂಲ ತತ್ವವಾಗಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಆಧುನಿಕ ತಂತ್ರಜ್ಞಾನ ಮತ್ತು ವೇಗದ ಬದುಕಿನ ನಡುವೆ ಸಿಲುಕಿರುವ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿರುವ ಪರಿಣಾಮ, ಬದಲಾದ ಆಹಾರ ಪದ್ಧತಿ, ದೈಹಿಕ ಶ್ರಮದ ಕೊರತೆ, ಮಾನಸಿಕ ಒತ್ತಡ ಮತ್ತು ಪರಿಸರ ಮಾಲಿನ್ಯದಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳಂತಹ ಜೀವನಶೈಲಿ ಆಧಾರಿತ ಕಾಯಿಲೆಗಳು ವ್ಯಾಪಕವಾಗಿ ಹೆಚ್ಚುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಎಂ.ಹೊಸೂರು ಗೇಟ್ ಬಳಿಯಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಆರೋಗ್ಯವೆಂಬುದು ಕೇವಲ ಆಸ್ಪತ್ರೆಗಳಲ್ಲಿ ಸಿಗುವ ವಸ್ತುವಲ್ಲ. ಅದು ನಮ್ಮ ದಿನಚರಿಯಲ್ಲಿ ಅಡಗಿದೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಔಷಧರಹಿತ ಚಿಕಿತ್ಸಾ ಪದ್ಧತಿಯಾದ ಪ್ರಕೃತಿ ಚಿಕಿತ್ಸೆ ಮಹತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ನಿಸರ್ಗವೇ ಶ್ರೇಷ್ಠ ವೈದ್ಯ ಎಂಬುದು ಪ್ರಕೃತಿ ಚಿಕಿತ್ಸೆಯ ಮೂಲ ತತ್ವವಾಗಿದೆ ಎಂದರು.
ಪ್ರತಿದಿನ ಕನಿಷ್ಠ ಅರ್ಧ ಗಂಟೆ ಕಾಲ ಯೋಗ ಮತ್ತು ವ್ಯಾಯಾಮ ಮಾಡುವುದು, ಸಾವಯವ ಹಾಗೂ ಪೌಷ್ಟಿಕ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಒತ್ತಡಮುಕ್ತ ಜೀವನ ನಡೆಸುವುದು ನಮ್ಮೆಲ್ಲರ ಸಂಕಲ್ಪವಾಗಬೇಕು. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದಂತೆ ತಡೆಯುವುದು ಅತ್ಯಂತ ಮುಖ್ಯವಾಗಿದೆ ಎಂದರು.ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯು ನಮ್ಮೆಲ್ಲರ ಬದುಕಿನಲ್ಲಿ ನಿಸರ್ಗದೊಂದಿಗೆ ಸಾಮರಸ್ಯದಿಂದ ಬದುಕುವ ಹೊಸ ಚೈತನ್ಯವನ್ನು ತುಂಬಲಿ. ಪ್ರಕೃತಿಯನ್ನು ರಕ್ಷಿಸಿ ಪ್ರಕೃತಿ ಚಿಕಿತ್ಸೆ ಅಳವಡಿಸಿಕೊಂಡಲ್ಲಿ ಆರೋಗ್ಯವಂತ ಕರ್ನಾಟಕ ಹಾಗೂ ಸ್ವಸ್ಥ ಭಾರತದ ನಿರ್ಮಾಣ ಮಾಡಬಹುದು ಎಂದರು.
ಪಂಚಭೂತಗಳಾದ ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶಗಳ ಸಮತೋಲನದ ಮೂಲಕ ನಮ್ಮ ದೇಹದ ಸ್ವಯಂ ಗುಣ ಪಡಿಸುವ ಶಕ್ತಿಯನ್ನು ಜಾಗೃತಗೊಳಿಸುವುದೇ ಈ ಪದ್ಧತಿಯ ವಿಶೇಷತೆ. ಯಾವುದೇ ಅಡ್ಡಪರಿಣಾಮಗಳಿಲ್ಲದೆ ರೋಗದ ಲಕ್ಷಣಗಳನ್ನು ಮಾತ್ರವಲ್ಲದೆ ರೋಗದ ಮೂಲ ಕಾರಣವನ್ನೇ ನಿರ್ಮೂಲನೆ ಮಾಡುವ ಶಕ್ತಿ ಪ್ರಕೃತಿ ಚಿಕಿತ್ಸೆಗಿದೆ ಎಂದರು.ಇಂದಿನ ವೈಜ್ಞಾನಿಕ ಯುಗದಲ್ಲಿ ಯಾವುದೇ ವೈದ್ಯಕೀಯ ಪದ್ಧತಿಯು ಜನಸಾಮಾನ್ಯರ ವಿಶ್ವಾಸವನ್ನು ಗಳಿಸಬೇಕಾದರೆ ಅದಕ್ಕೆ ವೈಜ್ಞಾನಿಕ ಪುರಾವೆ ಮತ್ತು ಸಂಶೋಧನೆ ಬಲ ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಆಯುಷ್ ಇಲಾಖೆ ಮತ್ತು ಸಂಶೋಧನಾ ಸಂಸ್ಥೆಗಳು ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಆಯುಷ್ ಸಂಶೋಧನಾ ಮಂಡಳಿಗಳು ನೂರಾರು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಅಂತಾರಾಷ್ಟ್ರೀಯ ಮಟ್ಟದ ದಾಖಲಾತಿ ಪುಸ್ತಕಗಳಲ್ಲಿ ಪ್ರಕಟಿಸಿರುವುದು ನಮ್ಮ ಸಾಂಪ್ರದಾಯಿಕ ಜ್ಞಾನಕ್ಕೆ ಸಿಕ್ಕಿರುವ ವೈಜ್ಞಾನಿಕ ಮನ್ನಣೆಯಾಗಿದೆ. ರಾಜ್ಯ ಸರ್ಕಾರವೂ ಕೂಡ ಆಯುಷ್ ವೈದ್ಯಕೀಯ ಪದ್ಧತಿಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.ತಾಲೂಕಿನಲ್ಲಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯು ಜಿಲ್ಲೆಯ ಜನರಿಗಷ್ಟೇ ಅಲ್ಲದೆ ದೇಶದ ಹಲವು ರಾಜ್ಯಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದು, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲು ಸಿದ್ಧವಿದೆ. ಈ ಸಂಸ್ಥೆಗೆ ಇನ್ನಷ್ಟು ಬಲ ತುಂಬಬೇಕಿದೆ ಎಂದು ಆಯುಷ್ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಡಿ. ಅಲರ್ಮೇಲ್ ಮಂಗೈ ಅವರಲ್ಲಿ ಸಚಿವರು ಮನವಿ ಮಾಡಿದರು.
ಇದೇ ವೇಳೆ ಸಂಸ್ಥೆ ಸೇವೆಗಳ ಕುರಿತಾದ ಹಾಗೂ ಆಯುಷ್ ಮಂತ್ರಾಲಯವು ಸಿದ್ಧಪಡಿಸಿದ್ದ ಸಾಕ್ಷ್ಯಚಿತ್ರಗಳನ್ನು ಸಚಿವರು ಬಿಡುಗಡೆಗೊಳಿಸಿದರು. ಇದರೊಂದಿಗೆ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಗಳ ಕುರಿತ ಇ-ದಾಖಲಾತಿ ಪುಸ್ತಕಕ್ಕೆ ಚಾಲನೆ ನೀಡಿದರು.ಸಮಾರಂಭದ ನಂತರ ವಿವಿಧ ರಾಜ್ಯಗಳ ಆರೋಗ್ಯಯುತ ಆಹಾರ ಮೇಳಕ್ಕೆ ಸಚಿವರು ಚಾಲನೆ ನೀಡಿದರು. ಸಿರಿಧಾನ್ಯ ಸೇರಿದಂತೆ ರಾಸಾಯನಿಕ ರಹಿತ ಖಾದ್ಯಗಳನ್ನು ಸವಿದ ಸಚಿವರು, ಸಸ್ಯವನದಲ್ಲಿ ಗಿಡ ನೆಟ್ಟು ನೀರೆರೆದರು.
ಈ ವೇಳೆ ಆಯುಷ್ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಡಿ.ಅಲರ್ಮೇಲ್ ಮಂಗೈ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಮಂಡಳಿ ನಿರ್ದೇಶಕರಾದ ಜ್ಯೋತಿ ಕೆಸ್ವಾನಿ, ಗೀತಾ ಬಿ.ಶೆಟ್ಟಿ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ವಾದಿರಾಜ್ ಸೇರಿದಂತೆ ಆಸ್ಪತ್ರೆ ವೈದ್ಯರು, ಸಂಶೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.