ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಆರೋಗ್ಯ ಬದುಕಿನಲ್ಲಿ ಬಹಳ ಮುಖ್ಯವಾದದ್ದು, ಹಣ ಸಂಪಾದನೆಯನ್ನು ಹೆಚ್ಚಾಗಿ ಮಾಡಬಹುದು. ಆದರೆ ಆರೋಗ್ಯ ಇತ್ತೀಚಿನ ದಿನಗಳಲ್ಲಿ ಸಂಪಾದನೆ ಮಾಡುವುದು ಕಷ್ಟವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ತಿಳಿಸಿದರು.ಪಟ್ಟಣದ ಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚಾಲುಕ್ಯ ಆಸ್ಪತ್ರೆಯ ಸಹಾಯ ಯೋಗದೊಂದಿಗೆ ಜ್ಞಾನವಿಕಾಸ ಸೃಜನಶೀಲ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಬಹಳ ವಿಶೇಷವಾಗಿ ಮಹಿಳೆಯರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿರುವುದು ಸಂತೋಷ ಎನಿಸುತ್ತದೆ. ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಬದುಕುವ ಮಹಿಳೆಯರಿಗೆ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಎರಡು ಕೂಡ ಸಮಸ್ಯಾತ್ಮಕವಾಗಿ ಕಾಡುತ್ತಿವೆ. ಧರ್ಮಸ್ಥಳ ಸಂಸ್ಥೆ ಹಾಗೂ ಚಾಲುಕ್ಯ ಆಸ್ಪತ್ರೆ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಸ್ವಉದ್ಯೋಗ, ಸಾಲ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಹಿಳೆಯರಿಗೆ ನೀಡುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದೇ ಎಂದು ಬದುಕಬಹುದು ಎಂದು ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ದಯಶೀಲ ಮಾತನಾಡಿ, ನಮ್ಮ ಸಂಸ್ಥೆಯು ಸಾಮಾಜಿಕವಾಗಿ ಆರ್ಥಿಕವಾಗಿ, ಧಾರ್ಮಿಕ ಮತ್ತು ಆರೋಗ್ಯದ ವಿಚಾರದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲ ಮಾಡಬೇಕು ಎಂಬ ದೃಷ್ಟಿಯಿಂದಲೇ ಇಡೀ ರಾಜ್ಯದ್ಯಂತ ಕೆಲಸ ಮಾಡುತ್ತಿದ್ದು ಗುಬ್ಬಿ ತಾಲೂಕಿನಲ್ಲಿ ಹಲವು ಸಾಮಾಜಿಕ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ನಮ್ಮ ಜೊತೆಯಲ್ಲಿ ಸಾಗುತ್ತಿರುವ ಚಾಲುಕ್ಯ ಆಸ್ಪತ್ರೆ ಸಹ ಆರೋಗ್ಯದ ನೆರವನ್ನು ನೀಡುವ ಮೂಲಕ ಗ್ರಾಮಾಂತರ ಭಾಗದ ಜನರಿಗೆ ಹೆಚ್ಚು ಅನುಕೂಲವನ್ನು ಕಲ್ಪಿಸಿದೆ ಇದರ ಸದುಪಯೋಗವನ್ನುತಾವು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಚಾಲುಕ್ಯ ಆಸ್ಪತ್ರೆಯ ಡಾ.ರಶ್ಮಿ ಮಾತನಾಡಿ, ಇದುವರೆಗೂ ತಾಲೂಕಿನಲ್ಲಿ 40 ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರ, ಕಣ್ಣಿನ ಉಚಿತ ಆರೋಗ್ಯ ಶಿಬಿರದಂತಹ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತಿರುವುದನ್ನು ನೋಡಿ ಹೆಚ್ಚು ಸಂತೋಷಪಟ್ಟಿದ್ದೇವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಚಾಲುಕ್ಯ ಆಸ್ಪತ್ರೆ ಸಿಇಒ ಡಾ. ನಾಗಭೂಷಣ್, ಡಾ. ಮಹಾಲಕ್ಷ್ಮಿ, ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರಾಜೇಶ್ ಎಸ್., ಸಂಸ್ಥೆಯ ಪ್ರೇಮಾ ಸೇರಿದಂತೆ 350ಕ್ಕೂ ಹೆಚ್ಚು ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದರು.