ಅರಕಲಗೂಡಿನಲ್ಲಿ ಹೋಟೆಲ್‌ಗಳ ಸ್ವಚ್ಛತೆ ಪರಿಶೀಲನೆ ನಡೆಸಿದ ಆರೋಗ್ಯ ಅಧಿಕಾರಿಗಳು

| Published : May 28 2024, 01:19 AM IST

ಅರಕಲಗೂಡಿನಲ್ಲಿ ಹೋಟೆಲ್‌ಗಳ ಸ್ವಚ್ಛತೆ ಪರಿಶೀಲನೆ ನಡೆಸಿದ ಆರೋಗ್ಯ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅರಕಲಗೂಡು ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿಗಳು ಪಟ್ಟಣದ ಕೆಲವು ಹೋಟೆಲ್‌ಗಳ ಮೇಲೆ ಸೋಮವಾರ ದಾಳಿ ನಡೆಸಿ ಪರಿಶೀಲಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು.

ಡೆಂಘೀ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಾಳಿ । ಆರೋಗ್ಯ ಇಲಾಖೆಯಿಂದ ಕ್ರಮ । ಹೋಟೆಲ್‌ ಮಾಲೀಕರಿಗೆ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿಗಳು ಪಟ್ಟಣದ ಕೆಲವು ಹೋಟೆಲ್‌ಗಳ ಮೇಲೆ ಸೋಮವಾರ ದಾಳಿ ನಡೆಸಿ ಪರಿಶೀಲಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು.

ಮಳೆ ಆರಂಭವಾದ ಹಿನ್ನೆಲೆ ಹಲವು ಸಾಂಕ್ರಾಮಿಕ ರೋಗಗಳು ಹರಡಲಿದ್ದು, ಇದರಲ್ಲಿ ಪ್ರಮುಖವಾಗಿ ಡೆಂಘೀ, ಚಿಕನ್ ಗುನ್ಯಾ ರೋಗಗಳು ಹೆಚ್ಚಾಗುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿವೆ. ಅಲ್ಲದೆ, ಕೇರಳಾಪುರದ ಬಸವನಹಳ್ಳಿಯಲ್ಲಿ ಕೆಲವು ದಿನಗಳ ಹಿಂದೆ ಕರಳು ಬೇನೆಯಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೋಮವಾರ ಪಟ್ಟಣದಲ್ಲಿರುವ ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್‌ಗಳಿಗೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಬಸವರಾಜ್ ಟಾಕಪ್ಪ ಶಿಗ್ಗಾವಿ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಚಂದ್ರೇಗೌಡ ಮತ್ತು ಆರೋಗ್ಯ ನಿರೀಕ್ಷಕ ಜಯರಾಮ್ ಭೇಟಿ ನೀಡಿ ಅಲ್ಲಿಯ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು.

ಪಟ್ಟಣದ ಕೋಟೆಯಲ್ಲಿರುವ ಮಾಂಸಾಹಾರಿ ಹೋಟೆಲ್‌ಗಳಾದ ಕಿಟ್ಟಿ, ಕೃಷ್ಣ ಹೋಟೆಲ್, ಅನ್ನಪೂರ್ಣೇಶ್ವರಿ ಹೋಟೆಲ್, ಶಾಂಭವಿ ಹೋಟೆಲ್, ಅರಕಲಗೂಡು ಮಿಲ್ಟ್ರಿ ಹೋಟೆಲ್‌ಗಳಿಗೆ ಭೇಟಿ ನೀಡಿ ಅಡಿಗೆಮನೆ ಮತ್ತು ಹೋಟೆಲ್‌ಗಳ ಸುತ್ತಮುತ್ತ ಇರುವ ಪರಿಸರವನ್ನು ವೀಕ್ಷಣೆ ಮಾಡಿದರು.

ಈ ವೇಳೆ ಪರವಾನಗಿ ನವೀಕರಿಸದಿರುವುದು ಕಂಡು ಬಂದಿತು. ಈ ವೇಳೆ ಅಧಿಕಾರಿಗಳು ಹೋಟೆಲ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಡಿಗೆ ಮನೆಯನ್ನು ಆಹಾರವನ್ನು ತಯಾರು ಮಾಡುವಾಗ ಸಂಪೂರ್ಣವಾಗಿ ಸ್ವಚ್ಛತೆ ಕಾಪಾಡಿಕೊಂಡು ತಯಾರು ಮಾಡುವವರು ಶುಭ್ರವಾಗಿ ಇರಬೇಕು. ಬಂದ ಗ್ರಾಹಕರಿಗೆ ಬಿಸಿ ನೀರನ್ನು ಕುಡಿಯುವುದಕ್ಕೆ ಕೊಡಬೇಕು. ಸಂಗ್ರಹ ಮಾಡುವ ನೀರಿನ ತೊಟ್ಟಿಗಳು ಸಂಪೂರ್ಣವಾಗಿ ಮುಚ್ಚಳದಿಂದ ಮುಚ್ಚಿರಬೇಕು. ಯಾವುದೇ ಕಾರಣಕ್ಕೂ ಅದನ್ನು ತೆರೆಯಬಾರದು. ಪ್ಲಾಸ್ಟಿಕ್‌ಗಳನ್ನು ಉಪಯೋಗಿಸಬಾರದು. ಹೋಟೆಲ್‌ಗಳಲ್ಲಿ ನೊಣಗಳನ್ನು ಕೂರಲು ಬಿಡಬಾರದು. ಪೂರ್ಣ ಪ್ರಮಾಣದಲ್ಲಿ ನೆಲವನ್ನು ಒರೆಸಿ ಟೇಬಲ್ ಅನ್ನು ಒರೆಸಿಕೊಂಡು ಸ್ವಚ್ಛವಾಗಿ ಇಡಬೇಕು. ಪರವಾನಗಿ ನವಿಕರಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹೋಟೆಲ್‌ಗಳ ಮಾಲೀಕರಿಗೆ ತಿಳಿಸಿದರು.

ಪಟ್ಟಣದ ಎಲ್ಲಾ ಹೋಟೆಲ್‌ಗಳಲ್ಲೂ ಕೂಡ ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ. ಸ್ವಚ್ಛತೆ ಕಾಪಾಡದಿದ್ದರೆ ಎಲ್ಲ ಅಂಗಡಿಗೆ ದಂಡವನ್ನು ಹಾಕಿ ಪರವಾನಿಗೆಯನ್ನು ರದ್ದು ಮಾಡಲಾಗುವುದು. ಅರಕಲಗೂಡು ಪಟ್ಟಣದಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಎಲ್ಲಾ ಕ್ರಮಗಳನ್ನು ಸರಿಯಾಗಿ ಕ್ರಮಬದ್ಧವಾಗಿ ಪಾಲಿಸಬೇಕು ಎಂದರು.

ಆರೋಗ್ಯ ನಿರೀಕ್ಷಕ ಚಂದ್ರೇಗೌಡ ಮಾತನಾಡಿ, ಪರಿಸರ ಮತ್ತು ಗ್ರಾಹಕ ಸ್ವಚ್ಛವಾಗಿರುತ್ತಾನೆ. ಆದ್ದರಿಂದ ಎಲ್ಲರ ಹೋಟೆಲ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಂಡು ಸಾರ್ವಜನಿಕರಿಗೆ ಉತ್ತಮ ರೀತಿಯ ಅಹಾರ ಪದಾರ್ಥವನ್ನು ಕೊಡಬೇಕು. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಪೇಟೆ ಪೆಟ್ರೋಲ್ ಬಂಕ್ ಮುಂಭಾಗ ಇರುವ ಹೋಟೆಲ್‌ನಲ್ಲಿ ತುಂಬಾ ಕೊಳಕು ಇರುವುದು ಕಂಡು ಬಂತು. ಅಲ್ಲಿ ಯಾವುದೇ ತರಹದ ಶುಚಿತ್ವವನ್ನು ಕಾಪಾಡುತ್ತಿಲ್ಲ. ಅಡಿಗೆ ಮನೆಯಾಗಲಿ, ಪಾತ್ರೆಗಳಾಗಲಿ, ಮಾಡಿರುವ ಮಾಂಸಾಹಾರಿ ಪದಾರ್ಥಗಳಾಗಲಿ ಯಾವುದಕ್ಕೂ ಮುಚ್ಚುಳವನ್ನು ಉಪಯೋಗಿಸದೇ ಇರುವುದು ಕಂಡು ಬಂತು. ಅವರಿಗೆ ಮುಖ್ಯ ಅಧಿಕಾರಿ ಎಚ್ಚರಿಸಿ ಇನ್ನು ಮುಂದೆ ಈ ತಪ್ಪನ್ನು ಮಾಡಬಾರದು. ಇಲ್ಲದಿದ್ದರೆ ಹೋಟೆಲ್‌ ಬಂದ್ ಮಾಡಿಸಲಾಗುವುದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಪ್ಲಾಸ್ಟಿಕ್ ಲೋಟ ವಶ:

ಕೆಲವು ಕಡೆ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಲೋಟಗಳನ್ನು ಉಪಯೋಗಿಸುತ್ತಿರುವುದು ಕಂಡು ಬಂತು. ತಕ್ಷಣ ಎಚ್ಚೆತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪ್ಲಾಸ್ಟಿಕ್ ಅನ್ನು ಉಪಯೋಗಿಸಬಾರದು ಎಂದು ಕೆಲವು ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡರು.