ಸಾರಾಂಶ
ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಪದ್ಧತಿಯ ಬಗ್ಗೆ ಸಂಬಂಧಿಸಿದ ಇಲಾಖೆಗಳಿಂದ ಅರಿವು ಮೂಡಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಬದಲಾವಣೆ ಆಗದಿರುವುದು ವಿಷಾದನೀಯ
ಯಲಬುರ್ಗಾ: ಆಧುನಿಕ ಜೀವನ ಶೈಲಿ, ಆಹಾರ ಕ್ರಮದಿಂದ ಹಲವರು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಪೋಷಕಾಂಶಯುಕ್ತ ಆಹಾರ ಪದ್ಧತಿಯಿಂದ ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ನಟರಾಜ ಹೇಳಿದರು.
ತಾಲೂಕಿನ ಬೇವೂರು ಗ್ರಾಮದ ಶಿಶುಪಾಲನಾ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಪದ್ಧತಿಯ ಬಗ್ಗೆ ಸಂಬಂಧಿಸಿದ ಇಲಾಖೆಗಳಿಂದ ಅರಿವು ಮೂಡಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಬದಲಾವಣೆ ಆಗದಿರುವುದು ವಿಷಾದನೀಯ ಎಂದರು.
ಸಿಡಿಪಿಒ ಬೆಟದೇಶ ಮಾಳೆಕೊಪ್ಪ ಮಾತನಾಡಿ, ಪೌಷ್ಟಿಕ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಪೋಷಣ್ ಅಭಿಯಾನ ಯೋಜನೆ ರೂಪಿಸಲಾಗಿದೆ. ಭಾರತವನ್ನು ಕಾಡುತ್ತಿರುವ ಅಪೌಷ್ಟಿಕತೆ ತೊಡೆದು ಹಾಕಲು ೫ ಗುರಿ ಹೊಂದಿದ್ದು, ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಕಿಶೋರಿಯರಲ್ಲಿ ಅಪೌಷ್ಟಿಕತೆ ನಿವಾರಣೆ, ರಕ್ತಹೀನತೆ ತಡೆಗಟ್ಟುವಿಕೆ, ಕುಂಠಿತ ಬೆಳವಣಿಗೆ, ಜನನ ತೂಕ ಕಡಿಮೆಯಾಗುವ ಸಮಸ್ಯೆ ನಿವಾರಿಸಲು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ೨೦೨೫ನೇ ಸಾಲಿನಲ್ಲಿ ಹಲವು ಅಂಶ ಇರಿಸಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದರು.ಗರ್ಭಿಣಿ, ಬಾಣಂತಿಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳಿಗಾರ, ದ್ಯಾಮಣ್ಣ ಗೊಂದಿ, ಅಂಗನವಾಡಿ ಮೇಲ್ವಿಚಾರಕಿಯರಾದ ಜಯಲಕ್ಷ್ಮೀ ಮೆಣಸಿನಕಾಯಿ, ಚೆನ್ನಮ್ಮ ಶಾನುಭೋಗರ, ಲಲೀತಾ ನಾಯ್ಕರ, ಮಾಧವಿ ವೈದ್ಯ, ಪದ್ಮಾವತಿ, ಮಂಜುಳಾ ಗುಗ್ಗರಿ, ಶಿವಪುತ್ರಮ್ಮ ಅಂಗಡಿ, ಗಿರೀಜಾ ಕಡಿವಾಲರ, ಪ್ರೇಮಲತಾ ಗುಡಸಲದ, ಜಯಶ್ರೀ ಕುದರಿ, ಪದ್ಮಾವತಿ ದಾಸರ, ಸುಮಾ ಕರಿಗಾರ, ಸಿಎಚ್‌ಒ ಮಂಜುಳಾ ಹೊಸಳ್ಳಿ ಸೇರಿದಂತೆ ಮತ್ತಿತರರು ಇದ್ದರು.