ಮಂಗಳೂರು: ಅಪಸ್ಮಾರ (ಮೂರ್ಛೆ) ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ಇದ್ದು, ಮೂಢನಂಬಿಕೆಗೆ ಬಲಿಯಾಗುತ್ತಿರವ ಜನರಿಗೆ ಸಮರ್ಪಕ ಅರಿವು ಮೂಡಿಸುವ ಮೂಲಕ ಅಪಸ್ಮಾರದ ಕುರಿತ ತಪ್ಪು ಕಲ್ಪನೆ ಹೋಗಲಾಡಿಸಲು ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕಚೇರಿಯಲ್ಲಿ ಬುಧವಾರ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ದ.ಕ. ವತಿಯಿಂದ ನಡೆದ ಅಂತಾರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೂರ್ಛೆ ರೋಗದ ಕುರಿತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಸೂಕ್ತ ಚಿಕಿತ್ಸೆಯನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಸುದರ್ಶನ್ ಸಿ.ಎಂ. ಮಾತನಾಡಿ, ಜಿಲ್ಲೆಯಾದ್ಯಂತ ನರ ಸಂಬಂಧಿ ಕಾಯಿಲೆಗಳ ಕುರಿತು ಗ್ರಾಮೀಣ ಮಟ್ಟದಲ್ಲಿ ಮಾಹಿತಿ ಮತ್ತು ಪರಿಶೋಧನೆ ಕಾರ್ಯಕ್ರಮ ನಡೆಸುತ್ತಿದ್ದು, ಪ್ರಸ್ತುತ ಅಂತಾರಾಷ್ಟ್ರೀಯ ಅಪಸ್ಮಾರ ದಿನದ ಅಂಗವಾಗಿ ಫೆ.9ರಿಂದ 14ರವರೆಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು, ಮಂಗಳೂರು ತಾಲೂಕು ಅರೋಗ್ಯ ಅಧಿಕಾರಿ ಡಾ. ಸುಜಯ್ ಕುಮಾರ್, ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ, ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕಿ ಸೌಮ್ಯಾ ಆರ್.ಕೆ., ಇಲಾಖೆಗೆ ಸಂಬಂಧಿಸಿದ ವಿವಿಧ ವಿಭಾಗದ ಅಧಿಕಾರಿಗಳು ಮತ್ತು ಬ್ರೈನ್ ಹೆಲ್ತ್ ಕ್ಲಿನಿಕ್‌ನ ಫಿಸಿಯೋಥೆರಪಿಸ್ಟ್ ಮತ್ತು ಮನಃಶಾಸ್ತ್ರಜ್ಞರು ಇದ್ದರು.