ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಿರಿ ಧಾನ್ಯಗಳಲ್ಲಿ ಪೌಷ್ಟಿಕಾಂಶಗಳ ಭಂಡಾರವೇ ಅಡಗಿದ್ದು, ಮನುಷ್ಯನ ಆರೋಗ್ಯ ವೃಧ್ದಿಗೆ ಸಿರಿ ಧಾನ್ಯಗಳ ಆಹಾರ ವರದಾನವಾಗಿದೆ ಎಂದು ಡಾ. ನಂದಾ ಹುಲ್ಲೊಳ್ಳಿ ಹೇಳಿದರು.ಇಲ್ಲಿನ ಶಿವಬಸವನಗರ ಲಿಂಗಾಯತ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದಿಂದ ಆಯೋಜಿಸಿದ ಆರೋಗ್ಯ ಆಸ್ವಾದ ಹಾಗೂ ಗೋವಿನ ಜೋಳದಿಂದ ಖಾರದ ಪದಾರ್ಥ, ಬೆಲ್ಲದ ಹೋಳಿಗೆ ತಯಾರಿಕೆ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ಯುವ ಪೀಳಿಗೆಗೆ ಈ ಆರೋಗ್ಯ ಭರಿತ ಸಿರಿಧಾನ್ಯಗಳ ಅರಿವು ಕೂಡ ಕಡಿಮೆ ಆಗುತ್ತಾ ಹೋಗುತ್ತಿದೆ. ಪೋಷಕರು ಸಿರಿಧಾನ್ಯದ ಆರೋಗ್ಯದ ಗುಟ್ಟುನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.
ಲಿಂಗಾಯತ ಮಹಿಳಾ ಸಮಾಜದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ತುಂಬಾ ಖುಷಿಯ ವಿಚಾರ. ಎಲ್ಲ ಮಹಿಳೆಯರು ಸಿರಿಧಾನ್ಯಗಳಿಂದ ಅಡುಗೆ ಮಾಡಿದರೆ. ಆರೋಗ್ಯಕಾರಿ ಅಂಶಗಳು, ರೋಗ-ರುಜಿನಗಳನ್ನು ದೂರವಿರದರೊಂದಿಗೆ ನಮ್ಮ ಕುಟುಂಬಸ್ಥರನ್ನು ರಕ್ಷಿಸಿಕೊಳ್ಳಲು ಅನುಕೂಲಕಾರಕ, ದೀರ್ಘಕಾಲದ ಕಾಯಿಲೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷ ನೈನಾ ಗಿರಿಗೌಡರ ಮಾತನಾಡಿ, ಹಳ್ಳಿ ಸೊಗಡಿನ ಗೊಂಜಾಳದಿಂದ ಖಾರದ ಪದಾರ್ಥ, ಬೆಲ್ಲದಿಂದ ಹೋಳಿಗೆ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಿರುವುದು ಬಹಳಷ್ಟು ಸಂತಸ ತಂದಿದೆ. ಗೋಂಜಾಳ ಅನ್ನುವುದು ಜಗತ್ತಿನ ದೊಡ್ಡ ಆಹಾರ ಪದಾರ್ಥ ಎಂದು ಹೇಳಬಹುದು. ಗೋಂಜಾಳದಲ್ಲಿ ಬೇಕಾದಷ್ಟು ಪದಾರ್ಥಗಳನ್ನೂ ತಯಾರಿಸಬಹುದು ಸ್ವೀಟ್ ಕಾರ್ನ್ ಸೇರಿದಂತೆ ಅನೇಕ ಪಾರ್ಥಗಳನ್ನು ಎಲ್ಲರು ಸ್ವೀಕರಿಸಬಹುದು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ಮಹಿಳೆಯರಿಗೂ ಈ ಕಾರ್ಯಕ್ರಮ ಅನುಕೂಲವಾಗಲಿ ಎಂದರು.
ಸ್ಪರ್ಧೆಯಲ್ಲಿ ಮಹಿಳೆಯರು ಸಜ್ಜಿರೊಟ್ಟಿ, ಶೆಂಗಾ ಚಟ್ಟಿ ಮೊಸರು, ಸಿರಿಧಾನ್ಯದಿಂದ ಮಾಡಿದ ರುಚಿಕರ ಆಹಾರ ಸ್ವೀಟ್ ಕಾರ್ನ್,ಬೆಲ್ಲದಿಂದ ತಯಾರಿಸಿದ ಹೋಳಿಗೆ ತುಪ್ಪ ಹಾಗೂ ವೈವಿಧ್ಯಮಯ ಆಹಾರ ಪ್ರದರ್ಶನದಲ್ಲಿ ಕಣ್ಮನ ಸೆಳೆದವು.ಈ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಗಾ ಬಿಂಗೆ, ಆಶಾ ಪಾಟೀಲ, ರತ್ನಪ್ರಭಾ ಬೆಲ್ಲದ, ಕಾರ್ಯದರ್ಶಿ ಕಾವೇರಿ ಕಿಲಾರಿ , ಸೇರಿದಂತೆ ಅನೇಕ ಮಹಿಳೆಯರು ಹಾಗೂ ಇತರರು ಇದ್ದರು.