ಪೌರ ಕಾರ್ಮಿಕರ ಆರೋಗ್ಯ ಸಂರಕ್ಷಣೆ ಅವಶ್ಯ: ಯು.ಪಿ.ಪಂಪಾಶ್ರೀ

| Published : Dec 01 2024, 01:31 AM IST

ಸಾರಾಂಶ

ಲಘು ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಪೌರ ಕಾರ್ಮಿಕರು ಸ್ವಚ್ಛತಾ ಕೆಲಸದಲ್ಲಿ ತೊಡಗುವುದರಿಂದ ಸೋಂಕುಗಳು ಹರಡುವ ಸಾಧ್ಯತೆಗಳಿರುತ್ತವೆ. ಮುನ್ನೆಚ್ಚರಿಕೆಯಾಗಿ ಗ್ಲೌಸ್, ಶೂಗಳನ್ನು ಧರಿಸಬೇಕು. ಆರು ತಿಂಗಳಿಗೊಮ್ಮೆ ರಕ್ತದೊತ್ತಡ, ಮಧುಮೇಹವನ್ನು ಪರೀಕ್ಷಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪೌರ ಕಾರ್ಮಿಕರು ಆರೋಗ್ಯದಿಂದ ಇದ್ದಾಗ ಮಾತ್ರ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಸಾಧ್ಯ ಎಂದು ನಗರಸಭೆ ಆಯುಕ್ತೆ ಯು.ಪಿ. ಪಂಪಾಶ್ರೀ ಹೇಳಿದರು.

ನಗರಸಭೆ ಆವರಣದಲ್ಲಿ ಫೋರಂ ಆಸ್ಪತ್ರೆ ಹಾಗೂ ನಗರಸಭೆ ಸಹಯೋಗದಲ್ಲಿ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪೈಲ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯದ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸಬಾರದು. ಉತ್ತಮ ಆಹಾರ ಸೇವಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ವಯಸ್ಸಾದಂತೆ ರಕ್ತದೊತ್ತಡ, ಮಧುಮೇಹ ಮತ್ತಿತರ ಸಮಸ್ಯೆಗಳು ಕಾಡುತ್ತಿರುತ್ತವೆ. ಅವೆಲ್ಲವನ್ನೂ ಆರಂಭಿಕ ಹಂತದಲ್ಲೇ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಬೇಕು. ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಿದಾಗ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಏನೇ ಆರೋಗ್ಯ ಸಮಸ್ಯೆಗಳಿದ್ದರೂ ವೈದ್ಯರ ಸಲಹೆಯನ್ನು ಪಡೆದು ಚಿಕಿತ್ಸೆ ಪಡೆದರೆ ರೋಗಗಳನ್ನು ದೂರವಿಡಬಹುದು ಎಂದರು.

ಫೋರಂ ಆಸ್ಪತ್ರೆ ವೈದ್ಯ ಡಾ.ರಂಜಿತ್ ಮಾತನಾಡಿ, ಲಘು ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಪೌರ ಕಾರ್ಮಿಕರು ಸ್ವಚ್ಛತಾ ಕೆಲಸದಲ್ಲಿ ತೊಡಗುವುದರಿಂದ ಸೋಂಕುಗಳು ಹರಡುವ ಸಾಧ್ಯತೆಗಳಿರುತ್ತವೆ. ಮುನ್ನೆಚ್ಚರಿಕೆಯಾಗಿ ಗ್ಲೌಸ್, ಶೂಗಳನ್ನು ಧರಿಸಬೇಕು. ಆರು ತಿಂಗಳಿಗೊಮ್ಮೆ ರಕ್ತದೊತ್ತಡ, ಮಧುಮೇಹವನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಹೇಳಿದರು.

ಮಲಬದ್ಧತೆ ಸಮಸ್ಯೆ ಇದ್ದರೆ ಅದನ್ನು ನಿರ್ಲಕ್ಷಿಸಬಾರದು. ಅದರಿಂದ ಕ್ಯಾನ್ಸರ್ ಹರಡುವ ಸಾಧ್ಯತೆಗಳಿರುತ್ತವೆ. ಆರಂಭದಲ್ಲೇ ಅದಕ್ಕೆ ಚಿಕಿತ್ಸೆ ಪಡೆದರೆ ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಫೋರಂ ಆಸ್ಪತ್ರೆ ವೈದ್ಯರಾದ ಡಾ.ಐಶ್ವರ್ಯ, ಡಾ.ಭರತ್‌ನಾರಾಯಣ್, ಡಾ.ಸುಶೀಲ್‌ಗೌಡ, ನಗರಸಭೆ ಪರಿಸರ ವಿಭಾಗದ ಅಭಿಯಂತರ ರುದ್ರೇಗೌಡ, ಆರೋಗ್ಯ ವಿಭಾಗದ ಚಲುವರಾಜಜು, ಪೌರಸೇವಾ ನೌಕರರ ಸಂಘದ ಉಪಾಧ್ಯಕ್ಷ ಆರ್.ನಾಗರಾಜು ಹಾಗೂ ಇತರರಿದ್ದರು.