ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ಆಶ್ರಯದಲ್ಲಿ ‘ಆರೋಗ್ಯಕರ ನಾಳೆಗಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ನಗರದ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಬುಧವಾರ ನಡೆದ 11 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ
ಮಡಿಕೇರಿ: ಆಯುರ್ವೇದವು ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪದ್ಧತಿಯಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳುವ ಸಮಗ್ರ ಜೀವನಶೈಲಿಯಾಗಿದೆ. ಪ್ರಕೃತಿ ಮತ್ತು ದೇಹದ ನಡುವಿನ ಸಮತೋಲನ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಲು ಆಯುರ್ವೇದ ಮಾರ್ಗದರ್ಶನ ನೀಡುತ್ತದೆ ಎಂದು ನೀಮಾ ಸಂಸ್ಥೆಯ ಡಾ.ರಾಜಾರಾಮ್ ಹೇಳಿದ್ದಾರೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ಆಶ್ರಯದಲ್ಲಿ ‘ಆರೋಗ್ಯಕರ ನಾಳೆಗಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ನಗರದ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಬುಧವಾರ ನಡೆದ 11 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಒತ್ತಡ, ಆಹಾರ ಪದ್ಧತಿಯ ಬದಲಾವಣೆ ಹಾಗೂ ನಿದ್ರೆಯ ಕೊರತೆಯಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸರಿಯಾದ ಆಹಾರ, ನಿಯಮಿತ ಜೀವನಕ್ರಮ, ಯೋಗ, ವ್ಯಾಯಾಮ ಹಾಗೂ ಪ್ರಕೃತಿಗೆ ಹೊಂದಿಕೊಂಡ ಜೀವನಶೈಲಿಗೆ ಆಯುರ್ವೇದದಲ್ಲಿ ಮಹತ್ವ ನೀಡಲಾಗಿದೆ ಎಂದು ಅವರು ನುಡಿದರು.ಕುಶಾಲನಗರ ಯೋಗಕ್ಷೇಮ ಆಸ್ಪತ್ರೆಯ ಆಯುರ್ವೇದ ವೈದ್ಯ ಡಾ.ಶ್ಯಾಮ್ ಪ್ರಸಾದ್ ಮಾತನಾಡಿ, ಆಯುರ್ವೇದ ಕೇವಲ ಕಾಯಿಲೆ ಬಂದ ನಂತರ ಚಿಕಿತ್ಸೆ ನೀಡುವ ಪದ್ಧತಿಯಲ್ಲ, ಆರೋಗ್ಯ ಕಾಪಾಡಿಕೊಂಡು ಕಾಯಿಲೆ ತಡೆಗಟ್ಟುವ ಜೀವನ ವಿಜ್ಞಾನವಾಗಿದೆ ಎಂದು ಅಭಿಪ್ರಾಯಪಟ್ಟರು.ಆಯು ಎಂದರೆ ಜೀವನ ಅಥವಾ ಆಯಸ್ಸು ಹಾಗೂ ವೇದ ಎಂದರೆ ವಿಜ್ಞಾನ. ಜೀವನ ಹೇಗೆ ಆರೋಗ್ಯಕರವಾಗಿ ನಡೆಸಬೇಕು ಎಂಬುದನ್ನು ತಿಳಿಸಿಕೊಡುವುದೇ ಆಯುರ್ವೇದದ ಪ್ರಮುಖ ಉದ್ದೇಶವಾಗಿದೆ. ನಮ್ಮ ಹಿರಿಯರು ಅನುಭವದ ಮೂಲಕ ತಿಳಿದುಕೊಂಡು, ಪೀಳಿಗೆಯಿಂದ ಪೀಳಿಗೆಗೆ ಅನುಸರಿಸಿಕೊಂಡು ಬಂದಿರುವ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಮನೆ ಮದ್ದುಗಳಲ್ಲಿಯೂ ಆಯುರ್ವೇದದ ತತ್ವಗಳು ಅಡಕವಾಗಿವೆ ಎಂದು ವಿವರಿಸಿದರು.ನಗರಸಭೆ ಅಧ್ಯಕ್ಷ ಪಿ.ಕಲಾವತಿ ಅವರು ಆಯುರ್ವೇದವು ಕೇವಲ ರೋಗ ನಿವಾರಣೆ ಮಾಡುವ ವೈದ್ಯ ಪದ್ಧತಿಯಲ್ಲ, ಅದು ಸೌಹಾರ್ದಯುತ ಮತ್ತು ಆರೋಗ್ಯಕರ ಜೀವನ ನಡೆಸುವ ಜೀವನ ಶೈಲಿಯಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ನೈಸರ್ಗಿಕ ಆರೋಗ್ಯ ರಕ್ಷಣೆಗೆ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಜಿ ಅವರು, ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು. ಆಯುಷ್ ಇಲಾಖೆಯ ದಿಶಾ ಪ್ರಾರ್ಥಿಸಿದರು, ಡಾ.ಸರಸ್ವತಿ ಸ್ವಾಗತಿಸಿದರು, ಡಾ.ಪಲ್ಲವಿ ನಾಯಕ್ ನಿರೂಪಿಸಿದರು, ಡಾ.ಸೌಪರ್ಣಿಕ ಉಪನ್ಯಾಸಕರ ಪರಿಚಯ ಮಾಡಿದರು. ಡಾ.ಕೆ.ಜಿ.ಶುಭ ವಂದಿಸಿದರು.ಗಿಡಮೂಲಿಕೆ ಪ್ರದರ್ಶನ: ಕಾರ್ಯಕ್ರಮದಲ್ಲಿ ದಿನನಿತ್ಯದ ಬದುಕಿನಲ್ಲಿ ಬಳಸಬಹುದಾದ ಪ್ರಮುಖ ಗಿಡಮೂಲಿಕೆಗಳು ಹಾಗೂ ಮನೆಮದ್ದುಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಗಿಡಮೂಲಿಕೆಗಳ ಪ್ರದರ್ಶನ ನಡೆಯಿತು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.