ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕಾಂಗ್ರೆಸ್ ಸರ್ಕಾರ ಆರೋಗ್ಯ, ಕುಡಿಯುವ ನೀರು ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ಒಕ್ಕಲಿಗರ ಭವನದಲ್ಲಿ ತಾಲೂಕು ಶಿಕ್ಷಕರ ದಿನ ಆಚರಣಾ ಸಮಿತಿ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ೧೩೮ನೇ ಜನ್ಮಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಉತ್ತಮವಾಗಿ ಕೆಲಸ ಮಾಡಿದರೆ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತು ದೇಶ ಅಭಿವೃದ್ಧಿ ಹೊಂದುತ್ತದೆ. ಕಲ್ಪತರು ನಾಡು ಶೈಕ್ಷಣಿಕವಾಗಿ ಉತ್ತಮ ಹೆಸರು ಪಡೆದಿದೆ. ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ದುಡಿಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶವನ್ನೂ ಸಹ ತಾಲೂಕಿಗೆ ನೀಡಬೇಕು. ಸರ್ಕಾರ ಎಲ್ಲ ಸರಕಾರಿ ಶಾಲೆಗಳಲ್ಲಿಯೂ ಬಿಸಿ ಊಟ ನೀಡುತ್ತಿದೆ. ಮಕ್ಕಳಿಗೆ ಪುಸ್ತಕ, ಯುನಿಫಾರಂ ಜೊತೆ ಷೂ-ಸಾಕ್ಸ್ ಕೂಡ ನೀಡುತ್ತಿದೆ. ಶಾಲೆಗೆ ಬರುವ ಯಾವುದೇ ಮಕ್ಕಳು ಹಸಿವಿನಿಂದ ತೊಂದರೆಯಾಗಿ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಈ ಕ್ರಮ ಕೈಗೊಂಡಿದೆ ಎಂದರು.ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಇ. ರಮೇಶ್ ಮಾತನಾಡಿ ಶಿಕ್ಷಣ ರಾಷ್ಟ್ರದ ಬುನಾದಿ. ಮಾನವ ವಿಕಾಸಕ್ಕೆ ಶಿಕ್ಷಣವೇ ಆಸರೆ. ಆದರೆ ಇಂದು ಶಿಕ್ಷಣದಿಂದ ವಿದ್ಯಾವಂತರು ಹೆಚ್ಚಾಗುತ್ತಿದ್ದರೂ ಮೌಲ್ಯ, ಸಂಸ್ಕಾರ ಕಡಿಮೆಯಾಗುತ್ತಿದೆ. ವಿದ್ಯಾವಂತರೇ ತಪ್ಪು ಮಾಡುತ್ತಿದ್ದಾರೆ. ಹೆಚ್ಚು ವಿದ್ಯಾವಂತರ ಮದುವೆಗಳೆ ವರ್ಷ ತುಂಬುವುದರೊಳಗೆ ಮುರಿದು ಬೀಳುತ್ತಿದೆ. ಈ ಬಗ್ಗೆ ಪೋಷಕರು ಉತ್ತಮ ಸಂಸ್ಕಾರ, ನಡೆ, ನುಡಿ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಕ್ಕಳಿಗೆ ಮನೆಯಲ್ಲಿಯೇ ನೀತಿಪಾಠಗಳನ್ನು ಹೇಳಿಕೊಡಬೇಕಿದೆ ಎಂದರು.ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ ಕತ್ತಲ ಅಜ್ಞಾನ ತೊರೆದು ಸನ್ಮಾರ್ಗ ತೋರಿಸುವವರು ಶಿಕ್ಷಕರು. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶಾಲೆಯಲ್ಲಿಯೇ ಕಳೆಯುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಾಲೆಯೇ ದೇವಸ್ಥಾನ, ಶಿಕ್ಷಕರೇ ದೇವರಿದ್ದಂತೆ. ತಂದೆ ತಾಯಿಯ ನಂತರದ ಸ್ಥಾನ ಶಿಕ್ಷಕರದ್ದೇ ಆಗಿದೆ. ಆದ್ದರಿಂದ ಶಿಕ್ಷಕರು ಅವರ ಜವಾಬ್ದಾರಿಯನ್ನು ಅರಿತು ತಾಳ್ಮೆಯಿಂದ ಮಕ್ಕಳನ್ನು ತಿದ್ದಿ ತೀಡಿ ಉತ್ತಮ ಪ್ರಜೆಗಳಾಗಿ ರೂಪಿಸಬೇಕಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ ಇಓ ಸುದರ್ಶನ್. ಬಿಇಓ ತಾರಾಮಣಿ, ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಪನಿರ್ಧೇಶಕ ಎಸ್.ಸಿ.ಮಂಜುನಾಥ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಂ, ಪ್ರಾಂಶುಪಾಲರಾದ ಎಂ.ಡಿ.ಶಿವಕುಮಾರ್ ಸೇರಿದಂತೆ ಹಲವು ಮುಖ್ಯೋಪಾಧ್ಯಾಯರು, ಪ್ರಾಶುಪಾಲರುಗಳು, ಖಾಸಗೀ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು ಇದ್ದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕರುಗಳು ಸಮಾರಂಭದ ಸ್ಥಳದವರೆಗೂ ಮೆರವಣಿಗೆಯಲ್ಲಿ ಸಾಗಿಬಂದರು.