ಸಾರಾಂಶ
ಹುಬ್ಬಳ್ಳಿ: ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಳವಡಿಸಲಾಗಿದ್ದ "ಹೆಲ್ತ್ ಕೇರ್ " ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಪರಿಶೀಲಿಸಲು ತನಿಖಾ ಸಮಿತಿ ರಚಿಸಲು ಪಾಲಿಕೆ ಸಾಮಾನ್ಯಸಭೆ ನಿರ್ಧರಿಸಿತು.
ಚಿಟಗುಪ್ಪಿ ಆಸ್ಪತ್ರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ನವೀಕರಣಗೊಳಿಸಲಾಗಿದೆ. ಇದರೊಂದಿಗೆ ರೋಗಿಗಳ ಸಮಗ್ರ ಮಾಹಿತಿ ಹಾಗೂ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ವಿವರವನ್ನು ನೋಡಲು ಅನುಕೂಲವಾಗುವಂತಹ ಕಿಯೋಸ್ಕ್‌ನ್ನು ಅಳವಡಿಸಲಾಗಿತ್ತು.ಇದರ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡಲಾಗಿತ್ತು. 2019ರಿಂದ ಈ ವರೆಗೆ ನಿರಂತರವಾಗಿ ಪ್ರತಿವರ್ಷ ₹15 ಲಕ್ಷ ನಿರ್ವಹಣೆಗಾಗಿ ಆ ಏಜೆನ್ಸಿಗೆ ಪಾಲಿಕೆ ಪಾವತಿಸುತ್ತಲೇ ಬರುತ್ತಿದೆ. ಅದರ ಗುತ್ತಿಗೆ ಅವಧಿ ಇನ್ನೊಂದು ತಿಂಗಳು ಮಾತ್ರ ಉಳಿದಿದೆ. ಆದರೆ, ಗುತ್ತಿಗೆ ಕೊಟ್ಟಾಗಿನಿಂದಲೇ ಕಿಯೋಸ್ಕ್ ಕೆಲಸ ಮಾಡುತ್ತಲೇ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯ ತಿಪ್ಪಣ್ಣ ಮಜ್ಜಗಿ ಸಭೆ ಗಮನಕ್ಕೆ ತಂದರು.
ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಈ ಕುರಿತು ಮಾತನಾಡಿ , ರೋಗಿಯ ವಿವರವುಳ್ಳ ಬಾರ್ ಕೋಡ್ ಜನರೆಟ್ ಆಗುತ್ತದೆ. ಆ ಬಳಿಕ ಆ ಬಾರ್ ಕೋಡ್‌ನ್ನು ಸ್ಕ್ಯಾನ್ ಮಾಡಿದರೆ ಸಾಕು ಆ ರೋಗಿಗೆ ಏನೇನು ಚಿಕಿತ್ಸೆ ನೀಡಲಾಗಿದೆ ಎಂಬ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಆದರೆ, ಕಳೆದ 5 ವರ್ಷದಿಂದಲೇ ಕಿಯೋಸ್ಕ್ ವರ್ಕ್ ಮಾಡುತ್ತಿಲ್ಲ ಎಂಬುದನ್ನು ಒಪ್ಪಿಕೊಂಡರು.ಹಾಗಾದರೆ ಇದು ಅವ್ಯವಹಾರವಾಗಲಿಲ್ಲವೇ? ಅದ್ಹೇಗೆ ಪ್ರತಿವರ್ಷ ₹15 ಲಕ್ಷ ನೀವು ಪಾವತಿಸುತ್ತಿದ್ದೀರಿ. ಪಾಲಿಕೆ ಆಯುಕ್ತರು, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರು ಸಹಿ ಮಾಡಿದ್ದು ಇದೆ. ಹಾಗಾದರೆ ನೀವು ಶಾಮೀಲಾಗಿದ್ದೀರಾ ಎಂದು ಮಜ್ಜಗಿ ಪ್ರಶ್ನಿಸಿದರು. ಉಳಿದ ಸದಸ್ಯರು ಧ್ವನಿಗೂಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಅದಕ್ಕೆ ಸದಸ್ಯರು ಒಪ್ಪಲಿಲ್ಲ. ಕೊನೆಗೆ ಮೇಯರ್ ರಾಮಣ್ಣ ಬಡಿಗೇರ್, 5 ಜನ ಸದಸ್ಯರ ತನಿಖಾ ಸಮಿತಿ ರಚಿಸಲಾಗುವುದು. ಇನ್ನು ಹದಿನೈದು ದಿನಗಳಲ್ಲೇ ಸಮಿತಿ ವರದಿ ಸಲ್ಲಿಸಬೇಕು. ವರದಿ ಬಂದ ಬಳಿಕ ತಪ್ಪಿಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
5ರೊಳಗೆ ಸಂಬಳ:ಪಾಲಿಕೆ ವ್ಯಾಪ್ತಿಯಲ್ಲಿನ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 5ನೇ ದಿನಾಂಕದೊಳಗೆ ಸಂಬಳ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು ಎಂದು ಮೇಯರ್ ರಾಮಣ್ಣ ಬಡಿಗೇರ ಆದೇಶಿಸಿದರು.ಇದಕ್ಕೂ ಮೊದಲು ಸಭಾ ನಾಯಕ ವೀರಣ್ಣ ಸವಡಿ ಹಾಗೂ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಪೌರ ಕಾರ್ಮಿಕರಿಗೆ ಸರಿಯಾಗಿ ನಿಗದಿತ ಅವಧಿಯೊಳಗೆ ಸಂಬಳ ನೀಡಬೇಕು. ಸರ್ಕಾರ ನೀಡುವವರೆಗೂ ಕಾಯುವ ಅವಶ್ಯಕತೆ ಇಲ್ಲ. ಪಾಲಿಕೆ ನೀಡಬೇಕು. ಇತ್ತೀಚೆಗೆ ಪೌರಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ಮಾಡಿದ್ದು, ಅವರ 10 ದಿನದ ಸಂಬಳ ಕಡಿತ ಮಾಡಲು ನಿರ್ಧರಿಸಿದ್ದು, ಸರಿಯಲ್ಲ. 134 ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ನೀಡಬೇಕು. 252 ಪೌರ ಕಾರ್ಮಿಕರ ನೇಮಕಾತಿ ಸಲುವಾಗಿ ಪಾಲಿಕೆ ಸದಸ್ಯರ ನಿಯೋಗದೊಂದಿಗೆ ಸರ್ಕಾರದ ಗಮನಕ್ಕೆ ತರಬೇಕು. 799 ಪೌರ ಕಾರ್ಮಿಕರ ನೇರ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಘನ ತ್ಯಾಜ್ಯ ನಿರ್ವಹಣೆ ಅಧಿಕಾರಿ ಮಲ್ಲಿಕಾರ್ಜುನ, ಪಾಲಿಕೆ ಹಂತದಲ್ಲಿ ಪೌರಕಾರ್ಮಿಕರ ಬೇಡಿಕೆ ಈಡೇರಿಸಲಾಗುವುದು ಎಂದರು.
ಘನತಾಜ್ಯ ನಿರ್ವಹಣೆಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯನಿರ್ವಹಣೆ ತಲೆನೋವಾಗಿ ಪರಿಣಮಿಸಿದೆ ಎಂದು ಪಾಲಿಕೆಯ ಸದಸ್ಯರಾದ ಸಂತೋಷ ಚವ್ಹಾಣ, ಚಂದ್ರಶೇಖರ ಮನಗುಂಡಿ, ಜ್ಯೋತಿ ಪಾಟೀಲ, ಲಕ್ಷ್ಮೀ ಹಿಂಡಸಗೇರಿ, ಕವಿತಾ ಕಬ್ಬೇರ ಸೇರಿದಂತೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು. ಕಸ ಸಂಗ್ರಹಿಸಲು ವಾಹನ ಬರುತ್ತಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬರುವುದಿಲ್ಲ, ವಾರ್ಡ್‌ಗಳಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ, ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುವುದಿಲ್ಲ, ಸದಸ್ಯರಿಗೆ ಅಗೌರವ ತೋರುತ್ತಿದ್ದಾರೆ. ಸಾರ್ವಜನಿಕರಿಗೆ ಈ ಸಮಸ್ಯೆ ಕುರಿತು ಉತ್ತರ ಹೇಳಲು ಆಗುತ್ತಿಲ್ಲ ಎಂದು ಮೇಯರ್ ಮುಂದೆ ಅಳಲು ವ್ಯಕ್ತಪಡಿಸಿದರು.
ಸದಸ್ಯೆ ಜ್ಯೋತಿ ಪಾಟೀಲ, ಹುಬ್ಬಳ್ಳಿ ಧಾರವಾಡ ಮಹಾನಗರ ಬೆಳೆಯುತ್ತಿದೆ. ಕಸ ನಿರ್ವಹಣೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಧಾರವಾಡ ಪ್ರತ್ಯೇಕ ಮಾಡಿ. ಆಗ ಪರಿಹಾರ ದೊರೆಯಲಿದೆ. ಘನ ತ್ಯಾಜ್ಯ ನಿರ್ವಹಣಾ ಅಧಿಕಾರಿಗೆ ಈ ಕೆಲಸ ನಿಭಾಯಿಸಲು ಸಾಧ್ಯವಾಗದಿದ್ದರೆ ಬೇರೆಯವರನ್ನು ನೇಮಿಸಿ ಎಂದು ಸಂತೋಷ ಚವ್ಹಾಣ ಆಗ್ರಹಿಸಿದರು. ಇದಕ್ಕೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿ, ಸದ್ಯ ವಾಹನ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಎಲ್ಲ ವಾರ್ಡ್‌ಗಳಿಗೆ ಒಂದು ವಾರದೊಳಗೆ ವಾಹನ ನೀಡಲಾಗುವುದು. ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು ಸ್ಥಳಕ್ಕೆ ನಿರಂತರ ಭೇಟಿ ನೀಡಲಿದ್ದಾರೆ ಎಂದು ಭರವಸೆ ನೀಡಿದರು.ಮೇಯರ್ ಗರಂ
ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಕುರಿತು ಪಾಲಿಕೆ ಬಹುತೇಕ ಸದಸ್ಯರು ಸಾಮಾನ್ಯ ಸಭೆಗೆ ಅಗೌರವ ತೊರುವಂತೆ ನಡೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ರಾಮಣ್ಣ ಬಡಿಗೇರ, ಸಾಮಾನ್ಯ ಸಭೆಗೆ ವಿಶೇಷ ಗೌರವವಿದೆ. ಎಲ್ಲರೂ ಗೌರವಯುತವಾಗಿ ನಡೆದುಕೊಳ್ಳಬೇಕು. ಒಬ್ಬರಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ನಿಮ್ಮ ನಿಮ್ಮಲ್ಲಿ ಮಾತನಾಡಿಕೊಳ್ಳುವುದು ಸರಿಯಲ್ಲ ಎಂದು ಕೋಪಗೊಂಡರು.ಹೊಲಿಗೆ ಯಂತ್ರ
2022-23 ಅವಧಿಯಲ್ಲಿ ವಿದ್ಯುತ್ ಹೊಲಿಗೆ ಯಂತ್ರಕ್ಕೆ ಟೆಂಡರ್ ಕರೆಯಲಾಗಿತ್ತು. ಆದರೆ ಇನ್ನೂ ನೀಡಿಲ್ಲ ಎಂದು ಸದಸ್ಯ ಸತೀಶ ಹಾನಗಲ್ ಸಭೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಟೆಂಡರ್ ವಿವಿಧ ಕಾರಣದಿಂದ ರದ್ದಾಗಿದೆ. ಈಗ ಮರು ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿ ನೀಡಲಾಗುವುದು ಎಂದರು.ಕಲುಷಿತ ನೀರು ಪೂರೈಕೆ, ರಸ್ತೆ ಗುಂಡಿಗಳ ಮುಚ್ಚಿಸಬೇಕು, ಮಳೆಗಳಿಂದ ಆಗುವ ಅನಾಹುತ ತಪ್ಪಿಸಬೇಕು. ಮರದ ಕೊಂಬೆಗಳ ಮೇಲಿರುವ ವಿದ್ಯುತ್ ತಂತಿಗಳ ತೆರವುಗೊಳಿಸುವುದು ಸೇರಿದಂತೆ ಅನೇಕ ವಿಚಾರಗಳನ್ನು ಶೂನ್ಯ ವೇಳೆಯಲ್ಲಿ ಚರ್ಚಿಸಲಾಯಿತು.