ಆರೋಗ್ಯವಂತ ಮಕ್ಕಳು ರಾಷ್ಟ್ರದ ಬಹುದೊಡ್ಡ ಆಸ್ತಿ

| Published : Dec 11 2024, 12:46 AM IST

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿನ 5,80,127 ಮಕ್ಕಳಿಗೆ ಜಂತುಹುಳು ನಿವಾರಕ ಔಷಧಿ ಮಾತ್ರೆ ಉಚಿತವಾಗಿ ವಿತರಿಸಲಾಗುತ್ತದೆ. ಶಾಲಾ-ಕಾಲೇಜುಗಳಿಂದ ಹೊರಗುಳಿದ ಮಕ್ಕಳಿಗೆ ಮಾಪ್ ಆಪ್ ಸುತ್ತಿನಲ್ಲಿ ಡಿ. 16ರಂದು ಈ ಮಾತ್ರೆ ನೀಡಲಾಗುತ್ತದೆ.

ಧಾರವಾಡ:

ಆರೋಗ್ಯವಂತ ಮಕ್ಕಳು ರಾಷ್ಟ್ರದ ಬಹುದೊಡ್ಡ ಆಸ್ತಿ. ಅವರ ಬೆಳವಣಿಗೆ ಮತ್ತು ಅವರಿಗೆ ಸಮಗ್ರ ಪೌಷ್ಟಿಕಾಂಶ ದೊರಕುವಂತೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಇಲ್ಲಿಯ ಕರ್ನಾಟಕ ಪ್ರೌಢಶಾಲೆಯಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ನಿಮಿತ್ತ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ವಿತರಿಸಿದ ಅವರು, ಜಿಲ್ಲೆಯ 1ರಿಂದ 19 ವರ್ಷದೊಳಗಿನ 5,80,127 ಮಕ್ಕಳಿಗೆ ಜಂತುಹುಳು ನಿವಾರಕ ಔಷಧಿ ಮಾತ್ರೆ ಉಚಿತವಾಗಿ ವಿತರಿಸಲಾಗುತ್ತದೆ. ಶಾಲಾ-ಕಾಲೇಜುಗಳಿಂದ ಹೊರಗುಳಿದ ಮಕ್ಕಳಿಗೆ ಮಾಪ್ ಆಪ್ ಸುತ್ತಿನಲ್ಲಿ ಡಿ. 16ರಂದು ಈ ಮಾತ್ರೆ ನೀಡಲಾಗುತ್ತದೆ ಎಂದರು.

ಮಕ್ಕಳ ಆರೋಗ್ಯದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರದ ರೀತಿಯಲ್ಲಿ ಮಾತ್ರೆ ತಯಾರಿಸಲಾಗಿದ್ದು, ಮಕ್ಕಳು ನಿಶ್ಚಿಂತೆಯಿಂದ ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕು. ಇದರಿಂದ ಹೊಟ್ಟೆನೋವು, ಆಯಾಸ ಹಾಗೂ ಇನ್ನಿತರ ಸಮಸ್ಯೆ ಕಡಿಮೆಯಾಗಿ ಅನಿಮಿಯ ತಡೆಗಟ್ಟಬಹುದು ಎಂದ ಅವರು, ಜಂತುಹುಳು ನಿಯಂತ್ರಿಸಿದರೆ ಶೇ. 70ರಷ್ಟು ರಕ್ತ ಹೀನತೆ ನಿಯಂತ್ರಿಸಬಹುದು ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ರೋಗ ಮುಕ್ತ ಉತ್ತಮ ಸಮಾಜದ ಸ್ಥಾಪನೆಯೇ ಇದರ ಉದ್ದೇಶವಾಗಿದೆ ಎಂದದರು.

ಕೆಇ ಬೋರ್ಡ್ ಸಂಸ್ಥೆಯ ಆಡಳಿತಾಧಿಕಾರಿ ಜಿ.ಆರ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುಜಾತಾ ಹಸವೀಮಠ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಬಿಇಒ ಅಶೋಕ ಸಿಂದಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಎನ್. ತನುಜಾ, ಆರೋಗ್ಯ ಇಲಾಖೆ ಅಧಿಕಾರಿ ಬಿ.ಆರ್. ಪಾತ್ರೋಟ ಇದ್ದರು.