ಸಾರಾಂಶ
ಎಲ್ಲ ದಾನಗಳಿಗಿಂತ ರಕ್ತದಾನ ಸರ್ವಶ್ರೇಷ್ಠ. 18 ರಿಂದ 60 ವರ್ಷದೊಳಗಿನ ಸುಮಾರು 45 ಕೆ.ಜಿ.ತೂಕವುಳ್ಳ ಆರೋಗ್ಯಪೂರ್ಣ ಪ್ರತಿ ವ್ಯಕ್ತಿ ರಕ್ತದಾನ ಮಾಡಬಹುದು. 3 ತಿಂಗಳಿಗೊಮ್ಮೆ ಪುರುಷರು, 6 ತಿಂಗಳಿಗೊಮ್ಮೆ ಮಹಿಳೆಯರು ರಕ್ತದಾನ ಮಾಡಬಹುದು. ರಕ್ತ ನೀಡಿದ ಕೆಲವೇ ಗಂಟೆಯಲ್ಲಿ ರಕ್ತ ಮರು ಶೇಖರಣೆಯಾಗಲಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮಾಜದಲ್ಲಿ ಪರಿಸರ ನೈರ್ಮಲ್ಯತೆಗೆ ಜೀವ, ಜೀವನ ಮುಡಿಪಾಗಿಟ್ಟಿರುವ ಸಫಾಯಿ, ಪೌರಕಾರ್ಮಿಕರ ಆರೋಗ್ಯಕರ ಜೀವನ ಬಲುಮುಖ್ಯ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಚ್ಛತಾ-ಹಿ-ಸೇವಾ- ಸ್ವಚ್ಛತೆಯೇ ಸೇವೆ-ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ಶುಚಿತ್ವ ದೇಶದ ಆರ್ಥಿಕ, ಆರೋಗ್ಯ ಸುಸ್ಥಿರತೆಗೆ ಸಾಕಾರವಾಗಲಿದೆ. ಇಂತಹ ದಿಟ್ಟ ಕೆಲಸವನ್ನು ಅಸಹ್ಯ ಪಡದೆ ಮಾಡುವ ಪೌರ ಕಾರ್ಮಿಕರನ್ನು ಪ್ರೀತಿಸುವ, ಗೌರವಿಸುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದರು.ಎಲ್ಲ ದಾನಗಳಿಗಿಂತ ರಕ್ತದಾನ ಸರ್ವಶ್ರೇಷ್ಠ. 18 ರಿಂದ 60 ವರ್ಷದೊಳಗಿನ ಸುಮಾರು 45 ಕೆ.ಜಿ.ತೂಕವುಳ್ಳ ಆರೋಗ್ಯಪೂರ್ಣ ಪ್ರತಿ ವ್ಯಕ್ತಿ ರಕ್ತದಾನ ಮಾಡಬಹುದು. 3 ತಿಂಗಳಿಗೊಮ್ಮೆ ಪುರುಷರು, 6 ತಿಂಗಳಿಗೊಮ್ಮೆ ಮಹಿಳೆಯರು ರಕ್ತದಾನ ಮಾಡಬಹುದು. ರಕ್ತ ನೀಡಿದ ಕೆಲವೇ ಗಂಟೆಯಲ್ಲಿ ರಕ್ತ ಮರು ಶೇಖರಣೆಯಾಗಲಿದೆ ಎಂದರು.ರಕ್ತದಾನದಿಂದ ಹಲವು ಗಂಭೀರ ಕಾಯಿಲೆ, ಹೃದ್ರೋಗ, ರಕ್ತದಲ್ಲಿನ ಶೇಖರಣೆಯಾದ ಕಬ್ಬಿಣಾಂಶದಿಂದ ಬರುವ ರಕ್ತ ಕ್ಯಾನ್ಸರ್ ಮತ್ತಿತರ ಆರೋಗ್ಯ ಸಮಸ್ಯೆ ದೂರವಾಗಲಿದೆ. ರಕ್ತದಾನದಿಂದ ಮಾನಸಿಕ ಆರೋಗ್ಯ ವೃದ್ಧಿಸಲಿದೆ ಎಂದರು.
ತಾಪಂ ಇಒ ಸುಷ್ಮಾ ಮಾತನಾಡಿ, ಗಾಂಧಿಜಯಂತಿ ಅಂಗವಾಗಿ ಎಲ್ಲರಿಗೂ ಆರೋಗ್ಯ ಎನ್ನುವ ಪರಿಕಲ್ಪನೆ ಈ ಅಭಿಯಾನವಾಗಿದೆ ಎಂದು ಮಾಹಿತಿ ನೀಡಿದರು. ಶಿಬಿರದಲ್ಲಿ ಬಿಪಿ, ಮಧುಮೇಹ ಮತ್ತಿತರ ಸಮಸ್ಯೆಗಳ ತಪಾಸಣೆ ಮಾಡಿದರು.45 ಮಂದಿ ರಕ್ತದಾನ ಮಾಡಿದರು. 95 ಮಂದಿ ಶಿಬಿರದಲ್ಲಿನ ಉಚಿತ ಆರೋಗ್ಯ ತಪಾಸಣೆ ಸದ್ವಿನಿಯೋಗ ಪಡೆದುಕೊಂಡರು.
ಇದೇ ವೇಳೆ ವಿವಿಧ ಗ್ರಾಮಗಳ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ತಾಪಂ ಯೋಜನಾಧಿಕಾರಿ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್, ತಾಲೂಕಿನ ವಿವಿಧ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಸಿಬ್ಬಂದಿ ಇದ್ದರು.