ಕೊಪ್ಪಳ: ನಗರದ ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ವಸ್ಥ ವೃತ್ತ ವಿಭಾಗದಿಂದ 12ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಜೂಟೂರ ಮಾತನಾಡಿ, ವ್ಯಕ್ತಿಯ ಆರೋಗ್ಯ ಪ್ರಸನ್ನ ಆತ್ಮ,ಇಂದ್ರಿಯ ಹಾಗೂ ಮನಸ್ಸಿನ ಸಮತೋಲನದಿಂದ ಕೂಡಿರಬೇಕು. ಇವುಗಳ ರಕ್ಷಣೆಗೆ ಯೋಗ ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ನಿಯಮಿತ ಯೋಗಾಭ್ಯಾಸದಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಆರೋಗ್ಯಕರ ಜೀವನ ನಡೆಸಬಹುದು ಎಂದು ಹೇಳಿದರು.ಪ್ರಾಂಶುಪಾಲ ಡಾ.ಮಹಾಂತಗೌಡ ಬಿರಾದಾರ ಮಾತನಾಡಿ, ಸತ್ವ, ಆತ್ಮ ಮತ್ತು ಶರೀರದ ಸಮತೋಲನ ಕಾಪಾಡಲು ಯೋಗದ ಎಲ್ಲ ಅಂಗಗಳ ಪರಿಪಾಲನೆ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ.ಪ್ರಭು ಸಿ.ನಾಗಲಾಪೂರ, ಸಹಪ್ರಾಧ್ಯಾಪಕ ಡಾ. ಶಿವಬಸಯ್ಯ ಹಿರೇಮಠ ಹಾಗೂ ಯೋಗ ತರಬೇತಿದಾರ ಡಾ. ಶ್ರೀದೇವಿ ಬಡಿಗೇರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿ ಯೋಗದ ಮಹತ್ವ ವಿವರಿಸಿದರು.ಯೋಗ ಸ್ಪರ್ಧೆ,ಯೋಗ ರಸಪ್ರಶ್ನೆ, ಯೋಗ ಜಾಥಾ, ಯೋಗ ಮಾದರಿ ತಯಾರಿಕೆ ಹಾಗೂ ಯೋಗ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಯೋಗ ಸ್ಪರ್ಧೆ ಕೋಮಲ್ ಪ್ರಥಮ, ಸಂಧ್ಯಾ ದ್ವಿತೀಯ, ಯೋಗ ರಸಪ್ರಶ್ನೆಯಲ್ಲಿ ಖದೀಜಾ ತಂಡ ಪ್ರಥಮ, ಸ್ಫೂರ್ತಿ ಹಿರೇಮಠ ತಂಡ ದ್ವಿತೀಯ, ಯೋಗ ಮಾದರಿ ತಯಾರಿಕೆ ಜವೇರಿಯಾ ಮತ್ತು ಮೇಘನಾ ಪ್ರಥಮ, ಭೀಮಾಂಬಿಕಾ ದ್ವಿತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಸಂಗಮೇಶ ಹಿರೇಮಠ, ಕಾರ್ಯದರ್ಶಿ ವಾಣಿ ಕೆ.ಎಂ, ಪ್ರಾಧ್ಯಾಪಕ ಡಾ. ಚಂದ್ರಕಾಂತ ಹಾಗೂ ಡಾ. ಎಂ.ಆರ್.ಕುಲಕರ್ಣಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕೋಮಲ್ ಮತ್ತು ಖದೀಜಾ ನಿರೂಪಿಸಿದರು. ಡಾ. ಶಿವಬಸಯ್ಯ ಹಿರೇಮಠ ಸ್ವಾಗತಿಸಿದರು. ಡಾ. ಪ್ರಭು ಸಿ. ನಾಗಲಾಪೂರ ವಂದಿಸಿದರು.