ರಿಕ್ಷಾ ಚಾಲನೆ ವೇಳೆ ಹೃದಯಾಘಾತ: ಚಾಲಕ ಸಾವು

| Published : Aug 15 2024, 02:00 AM IST

ಸಾರಾಂಶ

. ಆಟೋ ಕೊಂಚ ಮುಂದೆ ಚಲಿಸಿ ಹೆದ್ದಾರಿಗೆ ನುಗ್ಗುತ್ತಿದ್ದರೆ ಪ್ರಯಾಣಿಕ ಮಹಿಳೆಯರಿಬ್ಬರ ಪ್ರಾಣಕ್ಕೆ ಕಂಟಕ ಎದುರಾಗಲಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ರಿಕ್ಷಾ ಚಲಾಯಿಸುತ್ತಿದ್ದ ವೇಳೆಯೇ ಚಾಲಕ ಹೃದಯಾಘಾತದಿಂದ ಮೃತಪಟ್ಟು ರಸ್ತೆಗೆಸೆಯಲ್ಪಟ್ಟಿದ್ದು, ಚಾಲಕನಿಲ್ಲದೆ ಮುಂದೆ ಚಲಿಸಿದ ಆಟೋ ಮತ್ತೊಂದು ಆಟೋಗೆ ಡಿಕ್ಕಿಯಾದ ಘಟನೆ ಮಂಗಳವಾರ ಮಧ್ಯಾಹ್ನ ತಾಲೂಕಿನ ಕೋಟೆಗಾರಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ಪ್ರಯಾಣಿಕ ಮಹಿಳೆಯರಿಬ್ಬರು ಪವಾಡಸದೃಶ ಪಾರಾಗಿದ್ದಾರೆ.

ಉಳ್ಳಾಲ ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44) ಮೃತರು.

ಮಜೀದ್ ಮಧ್ಯಾಹ್ನ 12 ಗಂಟೆಯ ವೇಳೆ ಧರ್ಮನಗರದಿಂದ ಸಂಬಂಧಿ ಮಹಿಳೆಯರಿಬ್ಬರನ್ನು ತನ್ನ ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಕೋಟೆಕಾರು ಬೀರಿಗೆ ಸಾಗುತ್ತಿದ್ದ ವೇಳೆ ಕೋಟೆಕಾರು ಹೆದ್ದಾರಿ ಬಳಿಗೆ ತಲುಪುತ್ತಿದ್ದಂತೆ ಹೃದಯಾಘಾತವಾಗಿ ರಸ್ತೆಗೆಸೆಯಲ್ಪಟ್ಟು ಮೃತಪಟ್ಟರು. ಚಾಲಕನಿಲ್ಲದ ಆಟೋ ಮುಂದೆ ಚಲಿಸಿದ್ದು ಅದೃಷ್ಟವಶಾತ್ ಅಲ್ಲೇ ಇದ್ದ ಆಟೋ ಪಾರ್ಕಿನಲ್ಲಿ ನಿಂತಿದ್ದ ನಿತ್ಯಾನಂದ ಎಂಬವರ ರಿಕ್ಷಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಆಟೋ ಕೊಂಚ ಮುಂದೆ ಚಲಿಸಿ ಹೆದ್ದಾರಿಗೆ ನುಗ್ಗುತ್ತಿದ್ದರೆ ಪ್ರಯಾಣಿಕ ಮಹಿಳೆಯರಿಬ್ಬರ ಪ್ರಾಣಕ್ಕೆ ಕಂಟಕ ಎದುರಾಗಲಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರಯಾಣಿಕ ಮಹಿಳೆಯರಲ್ಲಿ ಓರ್ವರು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯನ್ನು ಕ್ಲಿನಿಕ್ ಗೆ ಬಿಡಲು ಮಜೀದ್ ತೆರಳಿದ್ದರಂತೆ. ಘಟನೆಯಲ್ಲಿ ನಿತ್ಯಾನಂದ ಅವರ ರಿಕ್ಷಾಕ್ಕೆ ಹಾನಿಯುಂಟಾಗಿದೆ. ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗೊಂಡ ಮಹಿಳೆಯರನ್ನು ನಿತ್ಯಾನಂದ ಅವರು ತನ್ನ ರಿಕ್ಷಾದಲ್ಲೇ ಆಸ್ಪತ್ರೆಗೆ ಸೇರಿಸಿದ್ದಾರೆ.

ಮೃತ ಮಜೀದ್ ಶ್ರಮ ಜೀವಿಯಾಗಿದ್ದು ಹಗಲಿರುಳು ರಿಕ್ಷಾ ಚಲಾಯಿಸಿ ಸಂಪಾದನೆ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದರು. ದಿನ ನಿತ್ಯವೂ ಆಟೋದಲ್ಲಿ ಮಕ್ಕಳ ಸ್ಕೂಲ್‌ ಟ್ರಿಪ್‌ ಮಾಡಿ ಬದುಕು ಸಾಗಿಸುತ್ತಿದ್ದರು. ಪತ್ನಿ, ಒಂದು ಗಂಡು, ಮತ್ತೊಂದು ಹೆಣ್ಣು ಮಗುವನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.