ಬಿಸಿಗಾಳಿ ಆತಂಕ; ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ

| Published : Mar 05 2025, 12:33 AM IST

ಬಿಸಿಗಾಳಿ ಆತಂಕ; ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನದಲ್ಲಿ ಮುಂಬರುವ ದಿನಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವ ಕಾರಣ ಮಕ್ಕಳು ಸೇರಿದಂತೆ ಜನ- ಜಾನುವಾರುಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನದಲ್ಲಿ ಮುಂಬರುವ ದಿನಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವ ಕಾರಣ ಮಕ್ಕಳು ಸೇರಿದಂತೆ ಜನ- ಜಾನುವಾರುಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸಲಹೆ ನೀಡಿದ್ದಾರೆ.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂಬರುವ ಬೇಸಿಗೆ ಸಮಯದಲ್ಲಿ ಉಂಟಾಗಬಹುದಾದ ಕುಡಿಯುವ ನೀರು, ಮೇವು ಸಮಸ್ಯೆ, ಹಾಗೂ ಬಿಸಿಗಾಳಿಯಿಂದ ಉಂಟಾಗುವ ಪರಿಣಾಮಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ತಾಪಮಾನ ಹೆಚ್ಚಾಗಿ ಬಿಸಿ ಗಾಳಿ ಬೀಸುವ ಸಂಭವವಿದ್ದು ಇದರಿಂದ ಜನ-ಜಾನುವಾರುಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದರು.

ನೀರು, ಮೇವಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿಗಿ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಜಿಲ್ಲೆಯ ಗ್ರಾಮೀಣ, ನಗರದ ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರು ಸಮಸ್ಯೆ ಕಂಡುಬಂದಲ್ಲಿ ಅಧಿಕಾರಿಗಳು ತ್ವರಿತ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಗ್ರಾಮೀಣ ಭಾಗದ 54 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 98 ಗ್ರಾಮಗಳನ್ನು ಕುಡಿಯುವ ನೀರು ಸಮಸ್ಯೆ ಉದ್ಭವಿಸಬಹುದಾದ ಹಳ್ಳಿಗಳೆಂದು ಗುರ್ತಿಸಲಾಗಿದೆ. ಅವಶ್ಯಕತೆ ಇದ್ದಲ್ಲಿ ಖಾಸಗಿ ಬೋರ್‌ವೆಲ್‌ಗಳು ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.3 ಲಕ್ಷ ಟನ್‌ ಮೇವು:ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಈಗಾಗಲೇ ಗೋಶಾಲೆಗಳಲ್ಲಿ ಅಂದಾಜು 3 ಲಕ್ಷ ಟನ್ ರಷ್ಟು ಮೇವು ಮೇವು ಸಂಗ್ರಹಿಸಿಡಲಾಗಿದೆ ಎಂದು ಮಾಹಿತಿ ನೀಡಿದರು.

ಹಕ್ಕಿ ಜ್ವರ, ಎಚ್ಚರ:ಹಕ್ಕಿ ಜ್ವರ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೋಳಿಗಳು ಅಥವಾ ಇನ್ನಿತರ ಪ್ರಾಣಿ ಪಕ್ಷಿಗಳ ಅನುಮಾನಾಸ್ಪದವಾಗಿ ಅಸಹಜವಾಗಿ ಇಲ್ಲವೇ ಇದ್ದಕ್ಕಿದ್ದಂತೆ ಸಾವುಗಳು ಕಂಡುಬಂದಲ್ಲಿ ಹತ್ತಿರದ ಪಶು ಇಲಾಖೆಗೆ ಮಾಹಿತಿ ನೀಡಬೇಕು. ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಹಕ್ಕಿ ಜ್ವರ ಬರುವುದಿಲ್ಲ.ಬೇಸಿಗೆ ಸಮಯದಲ್ಲಿ ಕಾಲರಾ ರೋಗ ಉಲ್ಬಣವಾಗುವ ಸಾಧ್ಯತೆ ದಟ್ಟವಾಗಿದ್ದು, ಸಾರ್ವಜನಿಕರು ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಣ್ಣು ಹಾಗೂ ಹಸಿ ತರಕಾರಿಯನ್ನು ತೊಳೆದು ಸೇವಿಸಬೇಕು. ವಾಂತಿ ಅಥವಾ ಬೇಧಿ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಆರೋಗ್ಯ ಸಲಹೆ ಪಡೆದುಕೊಳ್ಳುಬೇಕು ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಎಚ್, ಜಿ.ಪಂ. ಉಪಕಾರ್ಯದರ್ಶಿ ಟಿ.ಕೆ. ರಮೇಶ್, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ ಸೇರಿದಂತೆ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.