ಸಾರಾಂಶ
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿ ಮೂರು ಘಟಕಗಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಿಂದೆಂದೂ ಇರದ ತೀವ್ರ ಪೈಪೋಟಿ ಏರ್ಪಟ್ಟಿದೆ. ಬೆಳಗಾವಿ ಮಹಾನಗರ ಜಿಲ್ಲೆ, ಬೆಳಗಾವಿ ಗ್ರಾಮೀಣ ಜಿಲ್ಲೆ ಹಾಗೂ ಚಿಕ್ಕೋಡಿ ಜಿಲ್ಲಾ ಘಟಕಗಳ ಪದಾಧಿಕಾರಿಗಳ ನೂತನ ಆಯ್ಕೆಯಾಗಬೇಕಿದೆ.
ಪಕ್ಷದಲ್ಲಿ ಸಲ್ಲಿಸಿದ ಸೇವೆ, ಸಂಘಟನೆ ಹಿರಿತನದ ಆಧಾರದ ಮೇಲೆ ಒಬ್ಬರನ್ನು ಆಯ್ಕೆ ಮಾಡುತ್ತಿದ್ದ ಬಿಜೆಪಿಯಲ್ಲಿ ಈಗ ಅಧ್ಯಕ್ಷ ಪದವಿಗೇರಲು ನಾ ಮುಂದೆ, ತಾ ಮುಂದೆ ಎಂದು ಹಲವು ನಾಯಕರು ತೀವ್ರ ಪೈಪೋಟಿಗಳಿದಿದ್ದಾರೆ. ಇದಕ್ಕೆ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರ ಬೇಕಿದೆ.ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಜಿಲ್ಲಾ ಘಟಕಗಳ ಪುನಾರಚನೆ ಪ್ರಕ್ರಿಯೆ ಮುನ್ನೆಲೆಗೆ ಬಂದಿದೆ. ಅಧ್ಯಕ್ಷ ಹುದ್ದೆಗೇರಿಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ನಾಯಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸಂಸದೆ ಮಂಗಲ ಅಂಗಡಿ, ಶಾಸಕ ಅಭಯ ಪಾಟೀಲ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಬೆಂಬಲಿಗರು ಪಕ್ಷದ ನಾಯಕರ ಸಂಪರ್ಕದಲ್ಲಿದ್ದು, ಲಾಬಿ ನಡೆಸುತ್ತಿದ್ದಾರೆ.
ಹಾಗೆ ನೋಡಿದರೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ , ಕೆನರಾ ಲೋಕಸಭಾ (ಕಿತ್ತೂರು,ಖಾನಾಪುರ ವಿಧಾನಸಭೆ ಕ್ಷೇತ್ರ) ಕ್ಷೇತ್ರದಲ್ಲಿವೆ. ಹಾಗಾಗಿ, ಪಕ್ಷದ ಸಂಘಟನೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಬಿಜೆಪಿ ಮೂರು ಜಿಲ್ಲಾ ಘಟಕಗಳನ್ನು ರಚನೆ ಮಾಡಿದೆ. ಈ ಮೂರು ಘಟಕಗಳ ಅಧ್ಯಕ್ಷರ ಅವಧಿ ಕೂಡ ಮುಗಿದಿದೆ. ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಮಾಡಬೇಕಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಘಟನೆ ದೃಷ್ಟಿಯಿಂದ ಜಿಲ್ಲಾ ಘಟಕಗಳ ಪುನಾರಚನೆಯೂ ಅಗತ್ಯವಾಗಿದೆ. ಕಳೆದ ವಿಧಾನಸಭೆಯಲ್ಲಿ ಟಿಕೆಟ್ ವಂಚಿತರು, ಮಾಜಿ ಶಾಸಕರು, ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ನಿಷ್ಠಾವಂತ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಸಹಜವಾಗಿಯೇ ಹೆಚ್ಚಾಗಿದ್ದು, ಇದರಿಂದಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.ಈಗಾಗಲೇ ಬೆಳಗಾವಿ ಮಹಾನಗರ ಜಿಲ್ಲಾಘಟಕದ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಅನಿಲ ಬೆನಕೆ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹಾಗೂ ಚಿಕ್ಕೋಡಿ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ ಅವರ ಅಧಿಕಾರವಧಿ ಮುಗಿದಿದೆ. ಆದಾಗ್ಯೂ, ಸಂಜಯ ಪಾಟೀಲ ಮತ್ತು ರಾಜೇಶ ನೇರ್ಲಿ ಮತ್ತೊಂದು ಅವಧಿಗೆ ಪುನರಾಯ್ಕೆ ಬಯಸಿದ್ದಾರೆ.
ಪಕ್ಷದ ನಾಯಕರಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿದೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳೀನಕುಮಾರ ಕಟೀಲ ಅವರ ಅಧಿಕಾರವಧಿ ಮುಗಿದ್ದರೂ ಹೊಸಬರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರಲಿಲ್ಲ. ಕೊನೆಗೂ ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಅದರಂತೆ ಬೆಳಗಾವಿ ಜಿಲ್ಲೆಯ ಮೂರು ಜಿಲ್ಲಾಘಟಕಗಳಲ್ಲಿಯೂ ಜಿಲ್ಲಾಧ್ಯಕ್ಷರ ಅಧಿಕಾರವದಿ ಮುಗಿದು ವರ್ಷವಾದರೂ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.ಪೈಪೋಟಿಯಲ್ಲಿ ಯಾರಿದ್ದಾರೆ?
ಸದ್ಯ ಬಿಜೆಪಿ ನಾಯಕತ್ವ ಪಟ್ಟಕ್ಕಾಗಿ ಬೆಳಗಾವಿ ಮಹಾನಗರ ಜಿಲ್ಲಾ ಘಟಕಕ್ಕೆ ಡಾ.ರವಿ ಪಾಟೀಲ, ರುದ್ರಣ್ಣ ಚಂದರಗಿ, ಮುರಘೇಂದ್ರ ಪಾಟೀಲ, ದಾದಾಗೌಡ ಬಿರಾದಾರ, ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕಕ್ಕೆ ರಮೇಶ ದೇಶಪಾಂಡೆ, ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಸುಭಾಷ ಪಾಟೀಲ, ಧನಂಜಯ ಜಾಧವ, ಸಂಜಯ ಪಾಟೀಲ, ಶ್ರೀನಿವಾಸ ಬಿಸನಕೊಪ್ಪ ಹಾಗೂ ಚಿಕ್ಕೋಡಿ ಜಿಲ್ಲಾ ಘಟಕಕ್ಕೆ ಮಾಜಿ ಸಚಿವ ಮಹೇಶ ಕುಮಟಳ್ಳಿ, ಸತೀಶ ಅಪ್ಪಾಜಿಹೋಳಿ , ಮಹೇಶ ಬಾತೆ, ದುಂಡಪ್ಪ ಬೆಂಡವಾಡೆ, ಪ್ರಭಾಕರ ಚವ್ಹಾಣ, ರಾಜೇಶ ನೇರ್ಲಿ ಅವರ ಹೆಸರು ಕೇಳಿಬರುತ್ತಿವೆ. ಅಂತಿಮವಾಗಿ ಪಕ್ಷದ ವರಿಷ್ಠರ ಕೃಪೆ ಯಾರ ಮೇಲೆ ಬೀಳುತ್ತದೆಯೋ? ಜಿಲ್ಲಾ ಬಿಜೆಪಿ ಸಾರಥಿಗಳು ಯಾರಾಗುತ್ತಾರೆ?ಎಂಬುದನ್ನು ಕಾದು ನೋಡಬೇಕು.