ಸಾರಾಂಶ
ಸುರಿಯುತ್ತಿರುವ ಸೋನೆ ಮಳೆಯಿಂದಾಗಿ ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಜೋಗಿಹಟ್ಟಿ, ಮಲ್ಲೋರಹಟ್ಟಿಯಲ್ಲಿ ಅಪಾರ ಬೆಳೆಹಾನಿ ಸಂಭವಿಸಿದೆ. ಹಳೆಯ ಹಲವು ಮನೆಗಳು ಕುಸಿದಿವೆ.
ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ
ಸುರಿಯುತ್ತಿರುವ ಸೋನೆ ಮಳೆಯಿಂದಾಗಿ ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಜೋಗಿಹಟ್ಟಿ, ಮಲ್ಲೋರಹಟ್ಟಿಯಲ್ಲಿ ಅಪಾರ ಬೆಳೆಹಾನಿ ಸಂಭವಿಸಿದೆ. ಹಳೆಯ ಹಲವು ಮನೆಗಳು ಕುಸಿದಿವೆ.ಚೆಕ್‌ಡ್ಯಾಂಗಳು ತುಂಬಿರುವುದರಿಂದ ಹಳ್ಳಗಳ ಆರ್ಭಟ ಕೂಡ ಹೆಚ್ಚಾಗಿದೆ. ಇದರಿಂದ ಮಲ್ಲೋಹರಟ್ಟಿ ಗ್ರಾಮದ ಸರ್ವೆ ನಂಬರ್ 29ರಲ್ಲಿ ರೈತ ಪಾಂಡುರಂಗ ಅವರು 3 ಎಕರೆಯಲ್ಲಿ ಬೆಳೆದಿದ್ದ ಶೇಂಗಾ ಜಲಾವೃತಗೊಂಡಿದ್ದು ರು. ಒಂದು ಲಕ್ಷ ನಷ್ಟವಾಗಿದೆ. ಸರ್ವೆ ನಂ.32 ರಲ್ಲಿ ಎಂ.ಎಸ್.ಜಯಣ್ಣ 2 ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೂ ನೀರು ನುಗ್ಗಿದೆ, ಸರ್ವೆ ನಂಬರ್ 39 ರಲ್ಲಿ ಎರಡೂವರೆ ಎಕರೆಯಲ್ಲಿ ಡಿ.ಜಿ ಸುರೇಶ್ ಬೆಳೆದಿರುವ ಈರುಳ್ಳಿ ಬೆಳೆ ನೀರುಪಾಲಾಗಿದೆ.
ಸರ್ವೆ ನಂಬರ್ 43 ರಲ್ಲಿ 3ಎಕರೆಯಲ್ಲಿ ರವೀಂದ್ರ ಬೆಳೆದಿರುವ ಶೇಂಗಾ ಬೆಳೆ ಕೂಡ ಹಾಳಾಗಿದೆ. ಗೌಡಗೆರೆ ಗ್ರಾಪಂ ಸದಸ್ಯೆ ಬಿ.ಮಂಜಮ್ಮ ಡಿ.ಜಿ.ಗೋವಿಂದಪ್ಪ ಅವರ 1.5 ಎಕೆರೆಯಲ್ಲಿ 800 ಅಡಿಕೆ ಗಿಡಗಳು, 600 ಶ್ರೀಗಂಧ ಗಿಡಗಳು ಕೊಚ್ಚಿಹೋಗಿವೆ. ಇದರಿಂದ 3 ಲಕ್ಷ ರು. ನಷ್ಟ ಸಂಭವಿಸಿದೆ. ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿ ಭೀಮಗೊಂಡನಹಳ್ಳಿ ಸರ್ವೆ ನಂವರ್ 22ರಲ್ಲಿ ಗೌಡಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಜಿ.ಗೋವಿಂದಪ್ಪ 2 ಎಕರೆಯಲ್ಲಿ ಬೆಳೆದಿದ್ದ ನವಣೆ ಬೆಳೆ ನೆಲಕಚ್ಚಿದೆ. 2 ಎಕರೆಯಲ್ಲಿ ಬೆಳೆದಿರುವ ಶೇಂಗಾ ಬೆಳೆ ಕೂಡ ಹಾಳಾಗಿದ್ದು, ರು ಒಂದು ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.