ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಜಿಲ್ಲೆಯಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಕೆ ಹಾಗೂ ತೆಂಗಿನ ತೋಟವನ್ನು ಬಲಿ ತೆಗೆದುಕೊಂಡಿದ್ದು, ರೈತರ ಪಾಲಿಗೆ ಕೈಗೆ ಬಂದು ತುತ್ತು ಬಾಯಿಗೆ ಬರದಂತಾಗಿದೆ.

ಹೊಳೆಹೊನ್ನೂರು ಹಾಗೂ ಆನವೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 36 ಹಳ್ಳಿಗಳಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆ ಫಸಲಿಗೆ ಬಂದಿದ್ದ ಅಡಕೆ ಮರಗಳನ್ನು ಧರೆಗುರುಳಿಸಿದೆ. ಇದರೊಂದಿಗೆ ಅಡಕೆ ಬೆಳೆಯನ್ನೇ ಜೀವನಾಧಾರವಾಗಿ ನಂಬಿಕೊಂಡಿದ್ದ ಸಾವಿರಾರು ರೈತರ ಬದುಕು ಅತಂತ್ರವಾಗಿದೆ.

ಭದ್ರಾವತಿ ತಾಲೂಕಿನಲ್ಲಿ ಅಡಕೆ ಪ್ರಮುಖ ಬೆಳೆ. ಸಾಮಾನ್ಯವಾಗಿ ಈ ಬಾಗ ರೈತರು ಅಡಕೆ ಬೆಳೆಯನ್ನೇ ನಂಬಿಕೊಂಡಿದ್ದಾರೆ. ಆನವೇರಿ, ಗುಡಮಗಟ್ಟ, ಮಲ್ಲಿಗೇನಹಳ್ಳಿ, ಲಕ್ಷ್ಮೀಪುರ, ಆದ್ರಿಹಳ್ಳಿ, ಕಲ್ಲಹಳ್ಳಿ, ದಿಗ್ಗೇನಹಳ್ಳಿ, ಮಂಗೋಟೆ, ಮಲ್ಲಾಪುರ, ಹನುಮಂತಾಪುರ, ನಾಗಸಮುದ್ರ, ಸಿದ್ಲೀಪುರ, ಡಣಾಯಕಪುರ, ಕೋಡಮಗ್ಗಿ, ಕೈಮರ, ಅರಹತೊಳಲು, ವಡ್ಡರಹಟ್ಟಿ, ಕಲ್ಲಿಹಾಳ್, ಚಂದನಕೆರೆ, ಬೈರನಹಳ್ಳಿ, ಕೆರೆಬೀರನಹಳ್ಳಿ, ತಡಸ, ಅಗರದಹಳ್ಳಿ, ಎಮ್ಮೆಹಟ್ಟಿ, ಯಡೇಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಳೆಯ ಅವಾಂತದಿಂದ ಬೆಳೆದಿದ್ದ ಅಡಕೆ ತೋಟಗಳ ಜತೆಗೆ ನೂರಾರು ಮನೆಗಳು ಹಾಳಾಗಿ ಹೋಗಿವೆ.

4500 ಎಕರೆಯಲ್ಲಿ ತೋಟ ನಾಶ.


ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಎರಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯಲಾಗಿದ್ದ ಸುಮಾರು 4500 ಎಕರೆಯಷ್ಟು ಅಡಕೆ ತೋಟ ನಾಶವಾಗಿ ಹೋಗಿದೆ ಎಂದು ತೋಟಗಾರಿ ಇಲಾಖೆ ಅಧಿಕಾರಿ ರಾಮಕೃಷ್ಣ ಹೇಳಿದರು.

ಪ್ರಮುಖ ಇಲಾಖೆ ಅಧಿಕಾರಿಗಳು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.

ಶೀಘ್ರ ವಿದ್ಯುತ್‌ ಸಮಸ್ಯೆ ನಿವಾರಣೆ

ಭಾರೀ ಗಾಳಿಯಿಂದ ಸುಮಾರು 480ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು 11ಕ್ಕೂ ಹೆಚ್ಚು ಟಿಸಿ ಕಂಬಗಳು ಮುರಿದು ಬಿದ್ದಿವೆ. ಸನ್ಯಾಸಿ ಕೋಡಮಗ್ಗಿ ಗ್ರಾಮವನ್ನು ಹೊರತು ಪಡಿಸಿ ಉಳಿದೆಲ್ಲಾ ಗ್ರಾಮಗಳಿಗೆ ವಿದ್ಯುತ್ ಸರಬರಾಜಯ ಆಗುತ್ತಿದೆ. ಕುಡಿಯುವ ನೀರು ಮತ್ತು ಮನೆ ಬಳಕೆಯ ವಿದ್ಯುತ್ ನೀಡಲಾಗಿದೆ. ಹೊಲಗದ್ದೆಯಲ್ಲಿ ಬೋರ್ವೆಲ್ ನಿಂದ ನೀರೆತ್ತಲು ಮತ್ತು ತೋಟ ಅಥವಾ ಜಮೀನುಗಳಲ್ಲಿರುವ ಒಂಟಿ ಮನೆಗಳಿಗೆ ಇನ್ನೆರಡು ದಿನಗಳಲ್ಲಿ ವಿದ್ಯತ್ ಒದಗಿಸಲಾಗುವುದು ಎಂದು ಜೆಇಇ ಚಂದ್ರಪ್ಪ ಹೇಳಿದರು.

ಸುಮಾರು ನಾಲ್ಕು ದಶಕಗಳಿಂದ ಇಷ್ಟು ತೀರ್ವವಾದ ಗಾಳಿ ಮಳೆಯನ್ನು ಕಂಡಿಲ್ಲ. ನೂರಾರು ರೈತರು ಇಂದು ಸಂಕಷ್ಟದಲ್ಲಿದ್ದಾರೆ. ತಕ್ಷಣ ಎಲ್ಲರಿಗೂ ಸೂಕ್ತವಾದ ಪರಿಹಾರವನ್ನು ಒದಗಿಸುವುದು ಸರ್ಕಾರದ ಕೆಲಸ.

ರಾಜೇಶ್ ಪಟೇಲ್ ರೈತ, ಅರಹತೊಳಲು.

ಪ್ರಕೃತಿ ಮುಂದೆ ಎಲ್ಲವೂ ಗೌಣ. ಆದರೆ ಸರ್ಕಾರಗಳು ರೈತರಿಗೆ ವೈಜ್ಞಾನಿಕವಾದ ಪರಿಹಾರ ನೀಡಬೇಕು. 50-60 ವರ್ಷಗಳ ಹಿಂದೆ ಮಾಡಿದ್ದಂತಹ ಪರಿಹಾರ ಸೂತ್ರವನ್ನು ಬದಲಾಯಿಸಿಕೊಂಡು ರೈತರ ಹಿತ ಕಾಯಬೇಕು.

ಎಂ.ಪಾಲಾಕ್ಷಪ್ಪ ಯಡೇಹಳ್ಳಿ.