ಹಾವೇರಿ ಜಿಲ್ಲಾದ್ಯಂತ ಭರ್ಜರಿ ಮಳೆ, ಸಿಡಿಲಿಗೆ ಯುವಕ ಬಲಿ

| Published : May 17 2024, 12:31 AM IST

ಸಾರಾಂಶ

ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು, ಗಾಳಿಯ ಆರ್ಭಟದೊಂದಿಗೆ ಮಳೆ ಸುರಿದಿದ್ದು, ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.

ಹಾವೇರಿ: ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು, ಗಾಳಿಯ ಆರ್ಭಟದೊಂದಿಗೆ ಮಳೆ ಸುರಿದಿದ್ದು, ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದ ದಯಾನಂದ ಹನುಮಂತಗೌಡರ ಪುಟ್ಟನಗೌಡ್ರ (20) ಸಿಡಿಲಿಗೆ ಬಲಿಯಾಗಿರುವ ಯುವಕ.

ಗುರುವಾರ ಸಂಜೆ ತಿಮಕಾಪುರ ಹದ್ದಿನಲ್ಲಿರುವ ಹೊಲದಲ್ಲಿನ ಮೋಟರ್ ಆಫ್ ಮಾಡಲು ತೆರಳಿದಾಗ ಭಾರೀ ಗಾಳಿ, ಗುಡುಗಿನ ಆರ್ಭಟಕ್ಕೆ ಮರದ ಕೆಳಗೆ ನಿಂತಿದ್ದ ದಯಾನಂದನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾದ್ಯಂತ ಮಳೆ-

ಜಿಲ್ಲಾದ್ಯಂತ ಗುರುವಾರ ಸಂಜೆ ಭಾರೀ ಮಳೆಯಿಯಾಗಿದೆ. ಶಿಗ್ಗಾಂವಿ ಪಟ್ಟಣದ ಮಾರುತಿ ನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿದೆ. ಗಾಳಿಯ ಆರ್ಭಟಕ್ಕೆ ಕೆಲವು ಮನೆಗಳ ತಗಡಿನ ಛಾವಣಿ ಹಾರಿಹೋಗಿದೆ. ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಹಿರೇಕೆರೂರು, ಬ್ಯಾಡಗಿ, ಹಾನಗಲ್ಲ ಭಾಗದಲ್ಲೂ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ. ಹಾವೇರಿ, ರಾಣಿಬೆನ್ನೂರು, ಸವಣೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲ ಝಳ ಜೋರಾಗಿತ್ತಾದರೂ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಸುರಿಯಲಾರಂಭಿಸಿದೆ. ಹಾವೇರಿ ನಗದಲ್ಲಿ ತುಂತುರು ಮಳೆಯಾಗಿದೆ. ಮಳೆಯಿಂದ ತಂಪು ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಎರಡು ಮೂರು ಸಲ ಮಳೆಯಾಗಿರುವುದರಿಂದ ಮುಂಗಾರು ಹಂಗಾಮಿನ ಸಿದ್ಧತೆಗೆ ರೈತರು ಅಣಿಯಾಗಿದ್ದಾರೆ.