ಕಾರಟಗಿ ತಾಲೂಕಿನಾದ್ಯಂತ ಭಾರಿ ಮಳೆ

| Published : Oct 06 2024, 01:21 AM IST

ಸಾರಾಂಶ

ತಾಲೂಕಿನಾದ್ಯಾಂತ ಹಿಂಗಾರು ಮಳೆ ಪ್ರವೇಶ ಉತ್ತಮವಾಗಿದ್ದು, ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದೆ. ತಡರಾತ್ರಿಯಿಂದ ಆರಂಭವಾಗಿ ಬೆಳಗಿನ ಜಾವದವರೆಗೂ ಸುರಿದಿದೆ.

ಹಿಂಗಾರು ಬಿತ್ತನೆ ಶುರು । ರೈತರ ಮೊಗದಲ್ಲಿ ನಗು

ಕನ್ನಡಪ್ರಭ ವಾರ್ತೆ ಕಾರಟಗಿ

ತಾಲೂಕಿನಾದ್ಯಾಂತ ಹಿಂಗಾರು ಮಳೆ ಪ್ರವೇಶ ಉತ್ತಮವಾಗಿದ್ದು, ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದೆ. ತಡರಾತ್ರಿಯಿಂದ ಆರಂಭವಾಗಿ ಬೆಳಗಿನ ಜಾವದವರೆಗೂ ಸುರಿದಿದೆ.

ಪಟ್ಟಣದಲ್ಲಿ ೮೫.೬ ಮಿಮೀ ಮತ್ತು ಸಿದ್ದಾಪುರದಲ್ಲಿ ೮೦.೦೦ ಮಿಮೀ ಮಳೆ ದಾಖಲಾಗಿದೆ. ಈ ಬಿರುಸಿನ ಮಳೆಯಿಂದ ಮುಂಗಾರು ಮುಗಿದು ಅಕ್ಟೋಬರ್‌ನಿಂದ ಹಿಂಗಾರು ಬಿತ್ತನೆ ಶುರುವಾಗಲಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಚೆಳ್ಳೂರು, ಚೆಳ್ಳೂರು ಕ್ಯಾಂಪ್, ಹಗೇದಾಳ, ಸೋಮನಾಳ, ಹುಳ್ಕಿಹಾಳ, ತೊಂಡಿಹಾಳ, ಮರ್ಲಾನಹಳ್ಳಿ, ರವಿನಗರ, ಸಿದ್ದಾಪುರ ಹೋಬಳಿ ವ್ಯಾಪ್ತಿಯ ನದಿ ಭಾಗದಲ್ಲಿಯೂ ಸಹ ಉತ್ತಮ ಮಳೆಯಾಗಿದ್ದು, ಬತ್ತದ ಬೆಳೆಗೆ ಅನುಕೂಲವಾಗಿದೆ.

ಜೀವನಾಡಿ ತುಂಗಭದ್ರೆ ನದಿ ಹಾಗೂ ಎಡದಂಡೆ ಕಾಲುವೆ ಉಪ ಕಾಲುವೆಯಿಂದ ತಾಲೂಕು ನೀರಾವರಿ ಪ್ರದೇಶ ಹೊಂದಿದ್ದು, ಉಳಿದ ನಾಲ್ಕಾಣೆ ಭಾಗದಷ್ಟು ಪ್ರದೇಶ ಮಳೆಯಾಶ್ರಿತವಾಗಿದೆ.

ಈ ಬಾರಿಯ ಮುಂಗಾರು ಉತ್ತಮವಾಗಿ ಸುರಿದಿದ್ದು, ಕಾಲುವೆಗೂ ನೀರು ಬಿಟ್ಟಿರುವುದರಿಂದ ಅಂದಾಜು ೧೫ ಸಾವಿರ ಹೆಕ್ಟೇರ್‌ನಷ್ಟು ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ ನಾಟಿ ಕಾರ್ಯ ಮುಗಿದು ಭತ್ತದ ಗದ್ದೆಗಳು ನಳನಳಿಸುತ್ತಿದ್ದು, ಕೆಲ ಪ್ರದೇಶದಲ್ಲಿ ತೆನೆಗಳು ಹಾಲು ಕಟ್ಟುವ ಸ್ಥಿತಿಯಲ್ಲಿವೆ. ಇನ್ನು ಕೆಲ ಪ್ರದೇಶದಲ್ಲಿ ತೆನೆ ಒಡೆಯುವ ಹಂತಕ್ಕೆ ಬಂದಿದ್ದು, ರೈತರ ಮೊಗದಲ್ಲಿ ನಗು ಮೂಡಿದೆ.

ಹಿಂಗಾರು ಚುರುಕು:ತಾಲೂಕಿನ ಮಳೆಯಾಶ್ರಿತ ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಕೆಳ ಭಾಗ ಸೇರಿದಂತೆ ಮೈಲಾಪುರ ಜೊತೆಗೆ ಸಿದ್ದಾಪುರ ಹೋಬಳಿ ವ್ಯಾಪ್ತಿಯ ಸಿದ್ದಾಪುರ, ಈಳಿಗನೂರು, ನಂದಿಹಳ್ಳಿ ಸೀಮೆಯಲ್ಲಿ ಈಗಾಗಲೇ ಬಿತ್ತಿದ್ದ ಮೆಕ್ಕೆಜೋಳ ಮತ್ತು ಸೂರ್ಯಕಾಂತಿ ಬೆಳೆಗಳು ಬೆಳೆದು ಕಟಾವು ಹಂತಕ್ಕೆ ತಲುಪಿದಿದ್ದರೆ ಕೆಲವು ಕಡೆ ಕಟಾವು, ರಾಶಿ ಕಾರ್ಯ ನಡೆದಿದೆ.

ಇನ್ನೂ ಕಳೆದ ಎರಡ್ಮೂರು ದಿನಗಳಿಂದ ತಾಲೂಕಿನಾದ್ಯಾಂತ ಮಳೆ ಸುರಿಯುತ್ತಿದ್ದು, ಹಿಂಗಾರಿನ ಉತ್ತಮ ಪ್ರವೇಶವಾಗಿದೆ. ಈ ಲಕ್ಷಣಗಳನ್ನು ಅರಿತ ರೈತ ಸಮೂಹ ಹಿಂಗಾರಿಗೆ ಹುಳಿಗಡಲೆ ಬಿತ್ತನೆ ಮಾಡಲು ಸಿದ್ಧವಾಗಿದ್ದಾರೆ.

ಸಿದ್ದಾಪುರ, ಕಾರಟಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಹುಳಿಗಡಲೆ ಬೀಜ ಮಾರಾಟ ಭರ್ಜರಿಯಾಗಿದೆ.

ಹಿಂಗಾರು ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಈಗಾಗಲೇ ೫೦೦ ಕ್ವಿಂಟಲ್ ಬಿತ್ತನೆ ಬೀಜ ಮಾರಾಟ ಮಾಡಲಾಗಿದೆ. ಒಟ್ಟಿನಲ್ಲಿ ಬೀಜ ಕೊರತೆಯಾಗದಂತೆ ಇಲಾಖೆ ಕ್ರಮ ಕೈಗೊಂಡಿದ್ದು, ಒಟ್ಟು ೩ ಸಾವಿರದ ೫೦೦ ಎಕರೆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಕೃಷಿ ಅಧಿಕಾರಿ ನಾಗರಾಜ ರ್‍ಯಾವಳದ ತಿಳಿಸಿದ್ದಾರೆ.