ಸಾರಾಂಶ
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿದು ಜಮೀನುಗಳಿಗೆ ನೀರು ನುಗ್ಗಿ ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗಿದೆ. ತಾಲೂಕಿನ ಪುಟ್ಟಿಕೊಪ್ಪಲು ಗ್ರಾಮದಲ್ಲಿ ಮಳೆಯಿಂದ ಎರಡು ಮನೆಗಳು ಕುಸಿದು ಬಿದ್ದಿವೆ. ಹೊಳಲು ಗ್ರಾಮದ ಚಿಕ್ಕತಾಯಮ್ಮರ ವಾಸದ ಮನೆಗೆ ಹಾನಿಯಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿವಿಧೆಡೆ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಗಳ ಗೋಡೆಗಳು ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದೆ. ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿ ಹರಿದು ಜಮೀನುಗಳಿಗೆ ನೀರು ನುಗ್ಗಿದೆ.ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿದು ಜಮೀನುಗಳಿಗೆ ನೀರು ನುಗ್ಗಿ ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗಿದೆ.
ತಾಲೂಕಿನ ಪುಟ್ಟಿಕೊಪ್ಪಲು ಗ್ರಾಮದಲ್ಲಿ ಮಳೆಯಿಂದ ಎರಡು ಮನೆಗಳು ಕುಸಿದು ಬಿದ್ದಿವೆ. ಹೊಳಲು ಗ್ರಾಮದ ಚಿಕ್ಕತಾಯಮ್ಮರ ವಾಸದ ಮನೆಗೆ ಹಾನಿಯಾಗಿದೆ. ಎಚ್.ಸಿ.ತಿಮ್ಮೇಗೌಡ ಬಿನ್ ಚಿನ್ನಗಿರಿಗೌಡರ ಮನೆ ಸಂಪೂರ್ಣ ಕುಸಿದಿದೆ.ಪುಟ್ಟಿಕೊಪ್ಪಲು ಗ್ರಾಮದ ಮಂಜುಳಾ-ಪುಟ್ಟಸ್ವಾಮಿ ಮತ್ತು ಸಿದ್ದಾಪುರ ಜಯರಾಮುಗೆ ಅವರಿಗೆ ಸೇರಿದ ಮನೆಗಳ ಗೋಡೆಗಳು ಕುಸಿದು ಅಪಾರ ಹಾನಿ ಸಂಭವಿಸಿದೆ. ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ತಾಲೂಕಿನ ಹೊಳಲು ಗ್ರಾಮದಲ್ಲಿ ಎರಡು ದಿನದಿಂದ ಬಿದ್ದ ಬಾರಿ ಮಳೆಯಿಂದ ಚಿಕ್ಕತಾಯಮ್ಮ ಲೇ.ಎಚ್ .ಸಿ.ದೊಡ್ಡೇಗೌಡರ(ಎಚ್.ಡಿ.ರಾಜೇಶ್ ) ವಾಸದ ಮನೆ ಗೋಡೆ ಕುಸಿದು ವಸ್ತುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ 1 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎಚ್.ಸಿ.ತಿಮ್ಮೇಗೌಡ ಬಿನ್ ಚಿನ್ನಗಿರಿಗೌಡ (ಹಳೆಮನೆ) ವಾಸದ ಮನೆ ಸಂಪೂರ್ಣ ಕುಸಿದು ಬಿದ್ದು ಲಕ್ಷಾಂತರ ರುಪಾಯಿ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿದ ಮಂಡ್ಯ ತಹಸೀಲ್ದಾರ್ ಎಚ್.ವಿಶ್ವನಾಥ್ ಭೇಟಿ ನೀಡಿ ಪರಿಶೀಲಿಸಿದರು. ಸಂಬಂಧ ಪಟ್ಟ ಅಧಿಕಾರಿಗಳಿಗೆ ಪರಿಹಾರ ನೀಡುವ ಬಗ್ಗೆ ತಿಳಿಸಿದರು. ಈ ವೇಳೆ ರಾಜಸ್ವ ನಿರೀಕ್ಷಕ (ಆರ್ ಐ)ಮನೋಹರ್, ಗ್ರಾಮ ಆಡಳಿತಾಧಿಕಾರಿ (ವಿಎ) ಸಿ.ಗುಣಶೇಖರ್, ಸಹಾಯಕ ರಾಜೇಶ್, ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎಚ್.ಬಿ.ದೊಡ್ಡೇಗೌಡ ಹಾಗೂ ಮಾಜಿ ಅಧ್ಯಕ್ಷ ಎಚ್.ಬಿ.ನಾಗರಾಜ್, ಮಂಡ್ಯ ಮುದ್ರಣಾಲಯ ನಿರ್ದೇಶಕ ಎಚ್.ಎಸ್ ನಂದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಡಿ.ರವಿ ಇದ್ದರು.