ಸಾರಾಂಶ
ಭಟ್ಕಳ ತಾಲೂಕಿನಲ್ಲಿ ಬುಧವಾರವೂ ಮಳೆಯ ಆರ್ಭಟ ಮುಂದುವರಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಮಳೆಯ ಅಬ್ಬರಕ್ಕೆ ಮನೆಗಳಿಗೆ ಹಾನಿಯಾಗಿದೆ.
ಭಟ್ಕಳ: ತಾಲೂಕಿನಲ್ಲಿ ಬುಧವಾರವೂ ಮಳೆಯ ಆರ್ಭಟ ಮುಂದುವರಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಮಳೆಯ ಅಬ್ಬರಕ್ಕೆ ಮನೆಗಳಿಗೆ ಹಾನಿಯಾಗಿದೆ.
ಮಂಗಳವಾರ ತಡರಾತ್ರಿಯಿಂದ ಬುಧವಾರ ಮಧ್ಯಾಹ್ನದ ವರೆಗೂ ಭಾರೀ ಮಳೆ ಸುರಿದಿದ್ದು, ತಾಲೂಕಿನಲ್ಲಿ 171.2 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ. ವ್ಯಾಪಕ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪಟ್ಟಣದಲ್ಲಿ ಚರಂಡಿ ಕಾಮಗಾರಿಗೆ ರಸ್ತೆ ಅಗೆದಿದ್ದು, ಇದಕ್ಕೆ ಮುಚ್ಚಿದ ಮಣ್ಣು ಭಾರೀ ಮಳೆಗೆ ಕೊಚ್ಚಿ ಹೋಗಿ ರಸ್ತೆಯಲ್ಲಿ ವಾಹನಗಳು ಸಂಚರಿಸದಂತಾಗಿದೆ. ಬಾವಿ, ಕೆರೆ, ಹೊಳೆ ತುಂಬಿವೆ. ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ಗಟಾರದ ಹೂಳು ತೆಗೆಯದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿದಿದೆ.ತಾಲೂಕಿನಲ್ಲಿ ಮಳೆಗಾಲದ ಪೂರ್ವ ತಯಾರಿ ಕೆಲಸಗಳನ್ನು ಇನ್ನು ತನಕ ಕೈಗೆತ್ತಿಕೊಳ್ಳದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಾಪಕ ಮಳೆಗೆ ಗಟಾರದಲ್ಲಿರುವ ಕಸ, ಕಡ್ಡಿ, ತ್ಯಾಜ್ಯಗಳು ರಸ್ತೆ ಮೇಲೆ ಬಂದು ಬಿದ್ದಿದ್ದು, ಕೆಲವು ರಸ್ತೆಗಳಲ್ಲಿ ಓಡಾಡದ ಪರಿಸ್ಥಿತಿ ಉಂಟಾಗಿದೆ.
ಉತ್ತಮ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ರೈತರು ಕೃಷಿ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ. ಪ್ರಥಮ ಮಳೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಜೋರಾಗಿತ್ತು. ಗ್ರಾಮಾಂತರ ಭಾಗದಲ್ಲಿ ಮಂಗಳವಾರ ತಡರಾತ್ರಿ ಹೋಗಿದ್ದ ವಿದ್ಯುತ್ ಬೆಳಿಗ್ಗೆ ಆದರೂ ಪತ್ತೆ ಇರಲಿಲ್ಲ. ಬುಧವಾರ ಸಂಜೆ 5 ಗಂಟೆಯ ವರೆಗೂ ಸುರಿದ್ದ ಮಳೆ ನಂತರ ಸ್ವಲ್ಪ ಮಟ್ಟಿಗೆ ವಿರಾಮ ಪಡೆಯಿತು.ವ್ಯಾಪಕ ಮಳೆಗೆ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನೀಪಬಾದ ಗ್ರಾಮದ ನಿವಾಸಿ ಮಮ್ತಾಜ್ ಬೇಗಂ ಅವರ ವಾಸ್ತವ್ಯದ ಮನೆಯ ಗೋಡೆ ಮತ್ತು ಚಾವಣಿ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ.
ಬೆಳಕೆ ಗ್ರಾಮದ ಕೊಡ್ಲಿಮನೆ ಮೊಗೇರಕೇರಿ ಗ್ರಾಮದ ನಿವಾಸಿ ತಿಮ್ಮಪ್ಪ ನಾರಾಯಣ ಮೊಗೇರ ಅವರ ವಾಸ್ತವ್ಯದ ಮನೆಯ 20 ಹಂಚು ಭಾರಿ ಗಾಳಿ ಮಳೆಗೆ ಹಾರಿ ಹೋಗಿ ಹಾನಿಯಾಗಿದೆ. ಕೊಪ್ಪ ಗ್ರಾಮದ ಬೆಟ್ಕೂರ್ ನಿವಾಸಿ ಸುರೇಶ ರಾಮಕೃಷ್ಣ ಭಟ್ ರವರ ವಾಸ್ತವ್ಯದ ಮನೆಯ ಚಾವಣಿ ಬಿದ್ದು ಭಾಗಶಃ ಹಾನಿಯಾಗಿದೆ. ಮನೆ ಹಾನಿಯಾದ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದಾರೆ.ಭಟ್ಕಳದಲ್ಲಿ ಭಾರೀ ಮಳೆಗೆ ಮನೆಯೊಂದು ಹಾನಿಯಾಗಿರುವುದು.