ದೊಡ್ಡಬಳ್ಳಾಪುರದಲ್ಲಿ ವರುಣಾರ್ಭಟ: ಸಂಜೆ ಅಬ್ಬರದ ಮಳೆ

| Published : Apr 19 2025, 12:38 AM IST

ದೊಡ್ಡಬಳ್ಳಾಪುರದಲ್ಲಿ ವರುಣಾರ್ಭಟ: ಸಂಜೆ ಅಬ್ಬರದ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ರಸ್ತೆಗಳಲ್ಲಿ ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುವ ದೃಶ್ಯ ಕಂಡು ಬಂತು. ಕೆಲ ರಸ್ತೆಗಳು ಗುಂಡಿಮಯವಾಗಿದ್ದು, ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಶುಕ್ರವಾರ ಮಧ್ಯಾಹ್ನದ ನಂತರ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಸಂಜೆ 3.30ರ ವೇಳೆಗೆ ಆರಂಭಗೊಂಡ ಮಳೆ ಆರಂಭದಲ್ಲಿ ಸೋನೆ ಮಳೆಯಾಗಿ ಸುರಿಯಿತು. ಬಳಿಕ, ಗಾಳಿ-ಗುಡುಗಿನೊಂದಿಗೆ ಆರ್ಭಟಿಸಿದ ವರುಣ, 1 ಗಂಟೆ ಕಾಲ ಬೆಂಬಿಡದೆ ಸುರಿದಿದ್ದಾನೆ.ಕೆಲ ರಸ್ತೆಗಳಲ್ಲಿ ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುವ ದೃಶ್ಯ ಕಂಡು ಬಂತು. ಕೆಲ ರಸ್ತೆಗಳು ಗುಂಡಿಮಯವಾಗಿದ್ದು, ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು. ಕೆಲ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವ ಪ್ರಕರಣಗಳು ವರದಿಯಾಗಿವೆ.

ತಗ್ಗುಪ್ರದೇಶದ ಮನೆಗಳಿಗೆ ನುಗ್ಗಿದ ನೀರು:

ಭಾರೀ ಮಳೆಗೆ ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿರುವ ಘಟನೆ ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ನಡೆದಿದೆ. ಹಾಡೋನಹಳ್ಳಿ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ತಿರುಮಗೊಂಡನಹಳ್ಳಿಯಲ್ಲಿ ಚರಂಡಿ ಸ್ವಚ್ಛಗೊಳಿಸಿ ಹಲವು‌ ತಿಂಗಳುಗಳೇ ಕಳೆದಿವೆ. ಇದರ ಪರಿಣಾಮ ಇಂದು ಮಳೆಯಾದ ಹಿನ್ನೆಲೆ ನೇರವಾಗಿ ಚರಂಡಿ ನೀರು ಮಿಶ್ರಿತ ಮಳೆ ನೀರು ಮನೆಗಳಿಗೆ ನುಗ್ಗಿ ದವಸ-ಧಾನ್ಯ ನೀರು ಪಾಲಾಗಿವೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾಮದ ಆಂಜಿನಮ್ಮ ಮತ್ತು ವಿಜಿಯಮ್ಮ, ಪಂಚಾಯತಿ ಸದಸ್ಯೆ ನಂಜಮ್ಮ ಅವರದೂ ಸೇರಿದಂತೆ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಗ್ರಾಮಸ್ಥರ‌ ಮನವಿಗೆ ಹಾಡೋನಹಳ್ಳಿ ಪಂಚಾಯತಿ ಅಧಿಕಾರಿಗಳು ಸ್ಪಂದಿಸದ ಕಾರಣ ಈ ಅವಾಂತರ ಸೃಷ್ಟಿಯಾಗಿದೆ. ಈಗಾಲಾದರೂ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು‌ ಕಾಲಕಾಲಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಕೆಸರು ತುಂಬಿದ್ದ ರಸ್ತೆಯಲ್ಲಿ ಹಳ್ಳಕ್ಕೆ ಜಾರಿದ ಬಸ್‌:ರಸ್ತೆ ಅವ್ಯವಸ್ಥೆ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ರಸ್ತೆ ಬದಿಗೆ ಸಾಗಿರುವ ಘಟನೆ ತಾಲೂಕಿನ ಬೋಕಿಪುರದ ಬಳಿ ನಡೆದಿದೆ.ದೊಡ್ಡಬಳ್ಳಾಪುರ ಹಾದ್ರಿಪುರ ನಡುವಿನ ಸಾರಿಗೆ ಬಸ್ಸು ಶುಕ್ರವಾರ ಸಂಜೆ ಸಂಚರಿಸುವ ವೇಳೆ ತಿರುವಿನಲ್ಲಿ, ಹದಗೆಟ್ಟ ರಸ್ತೆ ಹಾಗೂ ತೀವ್ರವಾದ ಮಳೆಯಿಂದ ಕೆಸರು ಗುಂಡಿಯಂತಾದ ರಸ್ತೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸಾಗಿದೆ.ಹಾಗೆ ಮುಂದಕ್ಕೆ ಸಾಗಿದ್ದರೆ, ಬಸ್ ಪಲ್ಟಿ ಹೊಡೆದು ಪ್ರಯಾಣಿಕರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿ ದೊಡ್ಡ ಪ್ರಮಾದ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ಜೆಸಿಬಿ ಮೂಲಕ ಬಸ್ಸನ್ನು ಎಳೆಸಲಾಯಿತು ಎಂದು ತಿಳಿದು ಬಂದಿದೆ.

ಫೋಟೊ-18ಕೆಡಿಬಿಪಿ3- ಬೇಸಿಗೆ ಮಳೆಗೆ ಮಿಂದೆದ್ದ ದೊಡ್ಡಬಳ್ಳಾಪುರ.--18ಕೆಡಿಬಿಪಿ4- ಚರಂಡಿಗಳು ತುಂಬಿ ಉಕ್ಕುತ್ತಿರುವ ಕೊಳಚೆ ನೀರು.

--18ಕೆಡಿಬಿಪಿ5- ತಗ್ಗುಪ್ರದೇಶದ ಮನೆಗಳಿಗೆ ನುಗ್ಗಿರುವ ಮಳೆ ನೀರು.

--18ಕೆಡಿಬಿಪಿ6- ಮಳೆ ಪರಿಣಾಮ ಕೆಸರುಗದ್ದೆಯಾದ ರಸ್ತೆಯಲ್ಲಿ ಬದಿಯ ಹಳ್ಳಕ್ಕೆ ಸರಿದು ನಿಂತಿರುವ ಬಸ್‌.