ಗೋಕರ್ಣದಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

| Published : Aug 02 2024, 12:55 AM IST

ಸಾರಾಂಶ

ಇಲ್ಲಿನ ಭದ್ರಕಾಳಿ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಬೃಹತ್ ಪ್ರಮಾಣದ ನೀರು ಹರಿದು ಬಂದ ಪರಿಣಾಮ ರಸ್ತೆ ಅಂಚು ಕೊರೆದುಕೊಂಡು ಹೋಗಿದೆ.

ಗೋಕರ್ಣ: ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆಯವರೆಗೆ ಸುರಿದ ಭಾರಿ ಮಳೆಗೆ ಈ ಭಾಗದ ಜನಜೀವನ ಅಸ್ತವ್ಯಸ್ತವಾಗಿದೆ.

ರಾಜ್ಯ ಹೆದ್ದಾರಿ ೧೪೩ರ ಮಾದನಗೇರಿಯ ರೈಲ್ವೆ ಕ್ರಾಸ್, ಹಿತ್ತಲಮಕ್ಕಿ, ಸಿದ್ದೇಶ್ವರ, ಭದ್ರಕಾಳಿ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಹೀಗೆ ಮಾದನಗೇರಿಯಿಂದ ಗೋಕರ್ಣದ ವರೆಗಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿತು. ಹಲವಾರು ಕಡೆ ರಸ್ತೆ ಪಕ್ಕದ ಕಾಂಪೌಂಡ್‌ಗಳು ಕುಸಿದು ಬಿದ್ದಿದ್ದು, ರಾತ್ರಿ ವೇಳೆ ವಾಹನ ಸವಾರಿಗೆ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿತ್ತು.

ಗುರುವಾರ ಬೆಳಗ್ಗೆ ಮಳೆ ತುಸು ಕಡಿಮೆಯಾಗಿದ್ದರೂ ರಸ್ತೆಯಲ್ಲಿನ ಮಣ್ಣಿನ ರಾಶಿ, ರಾಡಿ ನೀರು ತುಂಬಿದ್ದು, ನಡೆದುಕೊಂಡು ಹೋಗುವವರು, ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈ ಮಾರ್ಗದ ಎಲ್ಲ ಕಡೆ ಚರಂಡಿಗಳನ್ನು ಮುಚ್ಚಲಾಗಿದೆ. ಇದನ್ನು ಮಳೆಗಾಲ ಪೂರ್ವದಲ್ಲಿ ತೆರವುಗೊಳಿಸದೆ ಬಿಟ್ಟಿರುವುದೇ ಅವಾಂತರಕ್ಕೆ ಕಾರಣವಾಗಿದೆ ಎಂದು ಜನರು ಹೇಳುತ್ತಿದ್ದಾರೆ.

ಇಲ್ಲಿನ ಭದ್ರಕಾಳಿ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಬೃಹತ್ ಪ್ರಮಾಣದ ನೀರು ಹರಿದು ಬಂದ ಪರಿಣಾಮ ರಸ್ತೆ ಅಂಚು ಕೊರೆದುಕೊಂಡು ಹೋಗಿದೆ. ಈ ನೀರು ಬರಲು ಪ್ರಮುಖವಾಗಿ ಗ್ರಾಪಂ ರಸ್ತೆಯಲ್ಲಿನ ಚರಂಡಿ ಮುಚ್ಚಿರುವುದೇ ಕಾರಣವಾಗಿದೆ. ಮಾದನಗೇರಿ, ಗೋಕರ್ಣದ ಭಾಗದ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಗ್ರಾಮೀಣ ಪ್ರದೇಶವಾದ ಗಂಗಾವಳಿ, ಹನೆಹಳ್ಳಿ, ಬಂಕಿಕೊಡ್ಲ, ನಾಡುಮಾಸ್ಕೇರಿ, ತದಡಿ ಹೊಸಕಟ್ಟಾ ಭಾಗದಲ್ಲಿ ಸಹ ರಸ್ತೆಗಳ ಮೇಲೆ ನೀರು ತುಂಬಿ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಕೆರೆಯಾದ ಮೀನು ಮಾರುಕಟ್ಟೆ: ಇಲ್ಲಿನ ಏಕಮುಖ ಸಂಚಾರ ವ್ಯವಸ್ಥೆಯ ಊರಿನಿಂದ ಹೊರಹೋಗುವ ಮಾರ್ಗದ ಮೀನು ಮಾರುಕಟ್ಟೆಯಲ್ಲಿ ನೀರು ತುಂಬಿ ಕೆರೆಯಾಗಿ ಮಾರ್ಪಟ್ಟಿತ್ತು. ರಸ್ತೆ ಯಾವುದು ಚರಂಡಿ ಯಾವುದು ಎಂದು ತಿಳಿಯದೆ ಜನರು ಸಂಚರಿಸಲು ಪರದಾಡಿದರು. ಐದು ಅಡಿಗೂ ಹೆಚ್ಚಿನ ನೀರು ತುಂಬಿತ್ತು. ದೊಡ್ಡವರು ನೀರಿನಲ್ಲಿ ಸಾಗಿದರೆ ಕೊಚ್ಚಿ ಹೋಗುವ ಅಪಾಯವಿತ್ತು. ಇನ್ನೂ ಗಂಜೀಗದ್ದೆಯಲ್ಲಿ ಚರಂಡಿ ನೀರು ರಸ್ತೆ ಉಕ್ಕಿ ಹರಿದು ನದಿಯಾಗಿತ್ತು.