ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹವಮಾನ ಇಲಾಖೆಯ ವರದಿಯಂತೆ ಜಿಲ್ಲೆ ಮತ್ತು ನಗರದಲ್ಲಿ ಗುರುವಾರ ಸಂಜೆ ಶುರುವಾದ ಗುಡುಗು ಸಹಿತ ಜೋರಾದ ಮಳೆಯು ಗಂಟೆಗಟ್ಟಲೆ ಧಾರಾಕಾರವಾಗಿ ಸುರಿದ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.ಮಾರ್ಚ್ ತಿಂಗಳಲ್ಲಿ ಸ್ವಲ್ಪ ಮಳೆಯು ಜಿಲ್ಲೆಯ ಅಲ್ಲಲ್ಲಿ ಕಂಡುಬಂದಿತು. ಏಪ್ರಿಲ್ ತಿಂಗಳಲ್ಲಿ ಹೆಚ್ಚಾಗಿ ಬಂದ ಮಳೆ ಇದಾಗಿದೆ. ಈಗಾಗಲೇ ಶಾಲಾ ಮಕ್ಕಳ ಮತ್ತು ಕಾಲೇಜು ಪರೀಕ್ಷೆ ಮುಗಿದು ಮನೆಯಲ್ಲಿ ಇರುವುದರಿಂದ ಮಳೆಯು ಅಷ್ಟೊಂದು ಸಮಸ್ಯೆ ಕೊಡಲಿಲ್ಲ. ರಸ್ತೆ ಮೇಲೆ ಮಳೆ ನೀರು ಜೋರಾಗಿಯೇ ಹರಿಯಿತು. ಆದರೇ ಸರಕಾರಿ ಇಲಾಖೆ ಮತ್ತು ಖಾಸಗಿಯಲ್ಲಿ ಕೆಲಸ ಮಾಡುವವರು ಮನೆಗೆ ಬರಲು ಸಮಸ್ಯೆಯಾಯಿತು. ಅದರಲ್ಲಿ ಕಾರು ಇರುವವರು ಯಾವ ಸಮಸ್ಯೆ ಇಲ್ಲದೇ ಮನೆಗೆ ತಲುಪಿದರು. ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ಪರದಾಡಬೇಕಾಯಿತು. ಈಗಾಗಲೇ ಹವಮಾನ ಇಲಾಖೆಯು ಕರ್ನಾಟಕದ ೧೨ ಜಿಲ್ಲೆಗಳನ್ನು ಯೆಲ್ಲೋ ಅಲರ್ಟ್ ಆಗಿ ಸೂಚನೆ ನೀಡಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕು ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಇನ್ನು ಮೂರು ದಿನ ಮಳೆ ಬರುವ ಮುನ್ಸೂಚನೆ ನೀಡಿದೆ.
ಶಾಂತಿನಗರದ 6ನೇ ಮುಖ್ಯ ರಸ್ತೆ, ತೇಜೂರು ರೋಡ್ ದೇವರಾಜು ಅರಸು ಹಾಸ್ಟೆಲ್ ಬಳಿ ಇರುವ ಅನೇಕ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಮನೆಯಿಂದ ಹೊರಗೆ ಬಂದಿದ್ದಾರೆ.ಈ ಬಗ್ಗೆ ಗಣೇಶ್ ಉಡುಪ ಮಾತನಾಡಿ, ನಗರದ ತಮ್ಲಾಪುರ ಆರನೇ ಕ್ರಾಸಿನಲ್ಲಿ ಬಹಳ ಸಮಸ್ಯೆ ಇದ್ದು, ಅದರಲ್ಲೂ ಮಳೆ ಬಂದರೇ ಸಾಕು ನೀರು ಹೋಗಲು ಕಷ್ಟವಿದೆ. ಏನು ಮಾಡುವುದು ಗೊತ್ತಾಗುತ್ತಿಲ್ಲ. ಚರಂಡಿ ಸಮರ್ಪಕವಾಗಿ ಇಲ್ಲದೆ ರಸ್ತೆ ಮೇಲಿನ ನೀರೆಲ್ಲಾ ಮನೆ ಒಳಗೆ ಬರುತ್ತಿದೆ. ಈ ಸಮಸ್ಯೆಗೆ ನಗರಸಭೆಯವರು ಪರಿಹಾರ ಮಾಡಿಕೊಡಬೇಕು. ಇನ್ನು ಶಾಸಕರು ಕೂಡ ಈ ಬಗ್ಗೆ ಗಮನಹರಿಸಲಿ ಎಂದು ಮನವಿ ಮಾಡಿದರು.
ಇದೆ ರೀತಿ ಹಾಸನದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ. ಕೂಡಲೇ ನಗರಸಭೆಯ ಸದಸ್ಯರು ಮತ್ತು ಅಧ್ಯಕ್ಷರು ಸ್ಥಳಕ್ಕೆ ಆಗಮಿಸಿ ಯುಜಿಡಿ, ಚರಂಡಿ ದುರಸ್ತಿ ಮಾಡಿ ಮಳೆ ನೀರು ಸರಗವಾಗಿ ಹರಿಯಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.