ನಗರದಲ್ಲಿ ಮಂಗಳವಾರ ತಡ ರಾತ್ರಿ ಸುರಿದ ಭಾರೀ ಪ್ರಮಾಣದ ಮಳೆ ವಿವಿಧೆಡೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಭಾರೀ ಪ್ರಮಾಣದ ಗುಡುಗು, ಸಿಡಿಲಿನೊಂದಿಗೆ ಸುರಿದ ಮಳೆಯು ವಿವಿಧೆಡೆ ಪ್ರವಾಹವನ್ನೇ ಸೃಷ್ಟಿಸಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಮಂಗಳವಾರ ತಡ ರಾತ್ರಿ ಸುರಿದ ಭಾರೀ ಪ್ರಮಾಣದ ಮಳೆ ವಿವಿಧೆಡೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಭಾರೀ ಪ್ರಮಾಣದ ಗುಡುಗು, ಸಿಡಿಲಿನೊಂದಿಗೆ ಸುರಿದ ಮಳೆಯು ವಿವಿಧೆಡೆ ಪ್ರವಾಹವನ್ನೇ ಸೃಷ್ಟಿಸಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.ಶರಾವತಿ ನಗರದಲ್ಲಿ ರಾಜಾಕಾಲುವೆ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಸುಮಾರು ಮನೆಗಳಿಗೆ ಗಲೀಜು ನೀರು ನುಗ್ಗಿದೆ. ಇಲ್ಲಿನ 7 ತಿರುವಿನ ನಿವಾಸಿಗಳಾದ ಗೌರಮ್ಮ, ಮಂಜುನಾಥ್, ಪದ್ಮಮ್ಮ, ಮಾದಯ್ಯ, ಲಿಲ್ಲಿ ಎಂಬುವರ ಮನೆಗೆ ನೀರು ನುಗ್ಗಿದ ಕಾರಣ ಮನೆಗಳ, ಫ್ರಿಡ್ಜು, ಟಿವಿ, ವಾಷಿಂಗ್ ಮಿಷನ್ ಮೊದಲಾದ ಯಂತ್ರೋಪಕರಣಗಳು ಹಾಳಾಗಿವೆ. ನಗರದ ಮಲ್ಲಿಗೆ ಇಡ್ಲಿ ಹೋಟೆಲ್‌ಗೂ ನೀರು ನುಗ್ಗಿದ್ದು, ಫ್ರಿಡ್ಜು ಹಾಳಾಗಿದೆ.
ಸಾಗರ ರಸ್ತೆಯ ಎಸ್.ಎಸ್. ಇಂಡಸ್ಟಿಸ್‌ಗೆ ಭಾರೀ ಪ್ರಮಾಣದ ನೀರು ನುಗ್ಗಿದೆ. ಮುಳ್ಳು ತಂತಿ ಮತ್ತು ಚೈನ್ ಲಿಂಕ್ ಮೆಶ್ ತಯಾರಿಸುವ ಇಂಡಸ್ಟ್ರೀಸ್ ನಲ್ಲಿ ತಯಾರಿಸಲಾಗಿದ್ದ ಲಕ್ಷಾಂತರ ರು. ಮೌಲ್ಯದ ತಂತಿಗಳು ಮತ್ತು ಇತರೆ ವಸ್ತುಗಳಿಗೆ ಮಳೆ ನೀರು ನುಗ್ಗಿ ಹಾನಿಗೊಳಗಾಗಿದೆ. ಆನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರನ್ನು ಫ್ಲೋಟಿಂಗ್ ಪಂಪ್ ಸಹಾಯದಿಂದ ಹೊರಕ್ಕೆಹಾಕಿದ್ದಾರೆ. ಭಾರೀ ಮಳೆಯಿಂದ ರಾಜಕಾಲುವೆ ಉಕ್ಕಿ ಹರಿದ ಪರಿಣಾಮದಿಂದ, ಸಾಗರ ರಸ್ತೆಯಲ್ಲಿರುವ ಮುಳ್ಳುತಂತಿ ಹಾಗೂ ಚೈನ್ ಲಿಂಕ್ ಮೆಶ್ ತಯಾರಿಸುವ ಎಸ್.ಎಸ್.ಇಂಡಸ್ಟ್ರೀಸ್ ಸಂಪೂರ್ಣ ಜಲಾವೃತವಾಗಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ತಂಡವು ಸತತ 1 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಪ್ಲೋಟಿಂಗ್ ಯಂತ್ರದ ಮೂಲಕ ಇಂಡಸ್ಟ್ರೀಗೆ ನುಗ್ಗಿದ ನೀರನ್ನು ಹೊರ ಹಾಕಿದೆ.ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಐಸಿ ಎಫ್‌ಎಸ್‌ಟಿಒ ಹುಸೇನ್, ಎಎಸ್‌ಐ ನೂರುಲ್ಲಾ, ಎಲ್.ಎಫ್. ಸುನೀಲ್, ಎಫ್.ಡಿ. ಸತೀಶ್, ಎಫ್.ಎಂ. ಅಭಿಷೇಕ್ ಭಾಗಿಯಾಗಿದ್ದರು.
ನಗರದ ಹೊರವಲಯ ಆಲ್ಕೋಳದಲ್ಲಿರುವ ಎಫ್‌ಸಿಐ (ಭಾರತೀಯ ಆಹಾರ ನಿಗಮ) ಕಚೇರಿಯ ಬೃಹದಾಕಾರದ ಕಾಂಪೌಂಡ್ ರಸ್ತೆ ಮೇಲೆ ಉರುಳಿ ಬಿದ್ದ ಘಟನೆ ನಡೆದಿದೆ. ಕಾಂಪೌಂಡ್ ಗೋಡೆ ಪಕ್ಕ ನಿಲ್ಲಿಸಿದ್ದ ಟಾಟಾ ಏಸ್ ಸರಕು ಸಾಗಾಣೆ ವಾಹನದ ಮೇಲೆ ಗೋಡೆ ಕುಸಿದು ಬಿದ್ದಿರುವುದರಿಂದ, ವಾಹನವು ಸಂಪೂರ್ಣ ಜಖಂಗೊಂಡಿದೆ. ಹಾಗೆಯೇ ವಿದ್ಯುತ್ ಕಂಬಗಳು ಕೂಡ ಧರಾಶಾಹಿಯಾಗಿವೆ. ಸುಮಾರು 15 ಅಡಿಗೂ ಎತ್ತರದ ಕಾಂಪೌಂಡ್ ಗೋಡೆಯಾಗಿದೆ. ಹಗಲು ವೇಳೆ ಏನಾದರೂ ಬಿದ್ದಿದ್ದರೆ ಭಾರೀ ದೊಡ್ಡ ಪ್ರಮಾಣದ ಅನಾಹುತ ಸಂಭವಿಸುತ್ತಿತ್ತು. ಘಟನೆಯಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ವಿದ್ಯುತ್ ವ್ಯತ್ಯಯವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಮಳೆ ಹಾನಿ ತಡೆಯುವಲ್ಲಿ ಪಾಲಿಕೆ ವಿಫಲ
ಮುಂಗಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಮಹಾನಗರ ಪಾಲಿಕೆ ತೋರಿದ ನಿರ್ಲಕ್ಷ್ಯದಿಂದಾಗಿ ನಗರದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ತೊಂದರೆಗೆ ಸಿಲುಕಿದ ಜನರು ಪಾಲಿಕೆ ವಿರುದ್ದ ಹಿಡಿಶಾಪ ಹಾಕಿದ್ದಾರೆ.ಕಳೆದ ಹಲವು ದಿನಗಳಿಂದ ದಿನ ಬಿಟ್ಟು ದಿನ ಮಳೆ ಸುರಿಯುತ್ತಿದೆ. ನಗರದ ಆರ್‌ಎಂಎಲ್ ನಗರ, ಸೀಗೆಹಟ್ಟಿ, ಅಶ್ವತ್ಥ್ ನಗರ, ಚಾಲುಕ್ಯನಗರ, ಕೃಷಿನಗರ, ಶರಾವತಿ ನಗರ ಮೊದಲಾದೆಡೆ ಮನೆಗಳಿಗೆ ನೀರು ನುಗ್ಗಿದೆ.ಆದರೆ ಮಹಾನಗರ ಪಾಲಿಕೆಯವರು ನಗರದಲ್ಲಿ ರಾಜಾಕಾಲುವೆ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.ಇದರಿಂದ ಮನೆಯೊಳಗಿದ್ದ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.ಟಾಸ್ಕ್ ಫೋರ್ಸ್ ರಚನೆ: ಮಾಯಣ್ಣಗೌಡ
ಕಳೆದ ಒಂದು ವಾರದಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ರಭಸವಾಗಿ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ಹಾನಿಯಾಗಿದೆ. ನಾವು ಪಾಲಿಕೆ ವತಿಯಿಂದ ರಾತ್ರಿಯಿಡಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ತತ್‌ಕ್ಷಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಮಳೆ ಗಾಳಿಯ ರಭಸಕ್ಕೆ ನೆಲಕ್ಕೆ ಉರುಳಿದ ಮರಗಳನ್ನು ತೆರವುಗೊಳಿಸಿದ್ದೇವೆ. ಅದಕ್ಕಾಗಿಯೇ ರ್‍ಯಾಪಿಡ್ ಆಕ್ಷನ್ ಫೋರ್ಸ್ ರೀತಿಯ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. 24X7 ಈ ಸೇವಾ ಕೇಂದ್ರ ತೆರೆದಿದ್ದು ಮಳೆಹಾನಿ ಸಂಭವಿಸಿದರೆ ಕೂಡಲೇ ಹೆಲ್ಪ್‌ಲೈನ್ ಸಂಖ್ಯೆ 18004257677ಕ್ಕೆ ಸಾರ್ವಜನಿಕರು ಸಂಪರ್ಕಿಸುವಂತೆ ಕೋರಿದರು.
ಮಳೆಬಾಧಿತ ಬಡಾವಣೆಗಳಿಗೆ ಶಾಸಕ ಚನ್ನಬಸಪ್ಪ ಭೇಟಿಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತೊಂದರೆಗೊಳಗಾದ ಶ್ರೀ ರಾಮನಗರ, ಕೆಂಚಪ್ಪ ಬಡಾವಣೆ ಹಾಗೂ ಶರಾವತಿ ನಗರದ ವಿವಿಧ ಭಾಗಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಬಡಾವಣೆಗಳಲ್ಲಿ ಮಳೆನೀರು ಸರಾಗವಾಗಿ ಹರಿಯದೆ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವುದನ್ನು ಗಮನಿಸಿದ ಶಾಸಕರು, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಬಡಾವಣೆಯ ಪ್ರಮುಖರು ಹಾಜರಿದ್ದರು.