ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ, ತೆಲಂಗಾಣ, ಒಡಿಶಾದಲ್ಲಿ ಚಂಡಮಾರುತ್ತ ಎದ್ದಿದ್ದು, ಕಲ್ಯಾಣ ಕರ್ನಾಟಕದಾದ್ಯಂತ ಮಳೆ ಹೆಚ್ಚಾಗಿ ಕೆಲ ಪ್ರದೇಶಗಳು ಹಾಗೂ ಮನೆಗಳು ಜಲಾವೃತಗೊಂಡಿವೆ.
ಕಲಬುರಗಿ/ಯಾದಗಿರಿ/ಬೀದರ್ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ, ತೆಲಂಗಾಣ, ಒಡಿಶಾದಲ್ಲಿ ಚಂಡಮಾರುತ್ತ ಎದ್ದಿದ್ದು, ಇದರ ಪರಿಣಾಮ ಕಲ್ಯಾಣ ಕರ್ನಾಟಕ ಭಾಗದಲ್ಲೂ ಭಾರಿ ಮಳೆ ಸುರಿಯುತ್ತಿದೆ. ಕಲಬುರಗಿ, ಯಾದಗಿರಿ, ಬೀದರ್ ಸೇರಿ ಈ ಭಾಗದ ಹಲವು ಜಿಲ್ಲೆಗಳಲ್ಲಿ 2 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 100ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಕಲಬುರಗಿ ತಾಲೂಕಿನ ಹೆರೂರ್ (ಕೆ) ಹೋಬಳಿಯಲ್ಲಿ ಶನಿವಾರ ಒಂದೇ ರಾತ್ರಿ 120 ಮಿ.ಮೀ. ಮಳೆ ಸುರಿದಿದೆ. ಭೀಮಾ, ಕಾಗಿಣಾ, ಕಮಲಾವತಿ, ಬೆಣ್ಣೆತೊರಾ, ಮುಲ್ಲಾಮಾರಿ, ಅಮರ್ಜಾ ಸೇರಿ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಪ್ರವಾಹ ಬಂದಿದ್ದು, ಕಲಬುರಗಿ-ಸೇಡಂ-ಹೈದ್ರಾಬಾದ್ ಸಂಪರ್ಕ ಕಡಿತಗೊಂಡಿದೆ.
ರೌದ್ರಾವತಿ ನದಿ ಪ್ರವಾಹದಲ್ಲಿ ಕಾಳಗಿಯ ನೀಲಕಂಠೇಶ್ವರ ಮಂದಿರ, ಮಳಖೇಡದಲ್ಲಿರುವ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನ, ಉತ್ತರಾದಿ ಮಠಗಳು ಜಲಾವೃತಗೊಂಡಿವೆ. ಚಂದ್ರಂಪಳ್ಳಿ-ಮುಲ್ಲಾಮಾರಿ ಜಲಾಶಯಗಳು ಭರ್ತಿಯಾಗಿವೆ. ಭೀಮಾ ನದಿಯ ಪ್ರವಾಹಕ್ಕೆ ಯಾದಗಿರಿಯ ವೀರಾಂಜನೇಯಸ್ವಾಮಿ ಹಾಗೂ ಕಂಗಳೇಶ್ವರ ಸೇರಿ ಹಲವು ದೇಗುಲಗಳು ಮುಳುಗಿವೆ. ಇದೇ ವೇಳೆ, ಕೊಡಗು, ಚಿಕ್ಕಮಗಳೂರು ಸೇರಿ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.
