ಕುಕನೂರಲ್ಲಿ ಅತಿ ಮಳೆ, ಹಿಂಗಾರು ಬಿತ್ತನೆ ವಿಳಂಬ

| Published : Oct 20 2024, 02:05 AM IST

ಸಾರಾಂಶ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಪಾರ ಮಳೆಗೆ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಕುಕನೂರು ತಾಲೂಕಿನಲ್ಲಿ ಹಿಂಗಾರು ಹಂಗಾಮು ಬಿತ್ತನೆ ವಿಳಂಬವಾಗಲಿದೆ. ಮೊದಲೇ ಯರೇ ಭೂಮಿ ಆಗಿರುವುದರಿಂದ ಜಮೀನಿನಲ್ಲಿ ಕಾಲಿಡುವುದು ಸಹ ಅಸಾಧ್ಯವಾಗಿದೆ. ಅದರಲ್ಲೂ ಬಿತ್ತನೆ ಮಾಡಬೇಕೆಂದರೆ ಇನ್ನೂ ಒಂದು ವಾರ ಭೂಮಿಯ ತೇವಾಂಶ ಒಣಗಬೇಕು.

ಕುಕನೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಪಾರ ಮಳೆಗೆ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಹಿಂಗಾರು ಹಂಗಾಮು ಬಿತ್ತನೆ ವಿಳಂಬವಾಗಲಿದೆ.

ತಾಲೂಕಿನ ಯರೇಭಾಗದಲ್ಲಿ ಹಿಂಗಾರು ಹಂಗಾಮಿನಲ್ಲಿ 30 ಸಾವಿರ ಹೆಕ್ಟೇರ್‌ಗೂ ಅಧಿಕ ಬಿತ್ತನೆ ಆಗುತ್ತದೆ. ಅದರಲ್ಲೂ ಕಡಲೆ ಬೆಳೆ ಅಂದಾಜು 26 ಸಾವಿರ ಹೆಕ್ಟೇರ್‌, ಜೋಳ 3 ಸಾವಿರ ಹೆಕ್ಟೇರ್‌, ಕುಸುಬೆ 100 ಹೆಕ್ಟೇರ್‌, ಗೋದಿ 100 ಹೆಕ್ಟೇರ್‌ ಹೀಗೆ ಹಿಂಗಾರು ಬಿತ್ತನೆ ಆಗುತ್ತಿದ್ದು, ಸದ್ಯ ಯರೇಭಾಗದ ಗ್ರಾಮಗಳಲ್ಲಿ ಅಲ್ಪ ಪ್ರಮಾಣದ ಬಿತ್ತನೆ ಮಾತ್ರ ಆಗಿದೆ.

ಹಸ್ತ ಮಳೆಗೆ ಬಿತ್ತನೆ: ಜೋಳ, ಕಡಲೆಯನ್ನು ಹಸ್ತ ಮಳೆಗೆ ಅಧಿಕವಾಗಿ ಬಿತ್ತನೆ ಮಾಡುತ್ತಾರೆ. ಹಸ್ತ ಮಳೆ ಆನಂತರ ಬರುವ ಚಿತ್ತಿ ಮಳೆಗೆ ಶೀಗಿ ಹುಣ್ಣಿಮೆ ಒಳಗೆ ಬಿತ್ತನೆ ಮಾಡುವುದು ಅಧಿಕ. ಆದರೆ ಈ ಸಲ ಅಧಿಕ ಪ್ರಮಾಣದಲ್ಲಿ ಚಿತ್ತ ಮಳೆ ಸುರಿದ್ದಿದ್ದರಿಂದ ಜಮೀನುಗಳಲ್ಲಿ ತೇವಾಂಶ ಹೆಚ್ಚಿದೆ.

ಮೊದಲೇ ಯರೇ ಭೂಮಿ ಆಗಿರುವುದರಿಂದ ಜಮೀನಿನಲ್ಲಿ ಕಾಲಿಡುವುದು ಸಹ ಅಸಾಧ್ಯವಾಗಿದೆ. ಅದರಲ್ಲೂ ಬಿತ್ತನೆ ಮಾಡಬೇಕೆಂದರೆ ಇನ್ನೂ ಒಂದು ವಾರ ಭೂಮಿಯ ತೇವಾಂಶ ಒಣಗಬೇಕು. ಹೀಗಾಗಿ ಬಿತ್ತನೆ ವಿಳಂಬವಾಗುತ್ತಿದೆ.

ಹವಾಮಾನ ಆಧಾರಿತ ಹಿಂಗಾರು: ಹಿಂಗಾರು ಬೆಳೆಗಳು ಹವಾಮಾನ ಆಧಾರಿತವಾಗಿದ್ದು, ಹಿಂಗಾರು ಬಿತ್ತನೆ ಹಿನ್ನಡೆ ಆದರೆ ಮುಂದಿನ ದಿನಗಳಲ್ಲಿ ಕಡಲೆ ಬೆಳೆಗೆ ಸಿಡಿ ಬರುತ್ತದೆ. ಜೋಳ ತೆನೆ ಕಟ್ಟುವುದಿಲ್ಲ. ಹಿಂಗಾರು ಬೆಳೆ ಬಿತ್ತನೆಗೆ ಮಳೆ ಅವಕಾಶವೇ ನೀಡುತ್ತಿಲ್ಲ. ಈಗಾಗಲೇ ಹಿಂಗಾರು ಬಿತ್ತನೆ ವೇಳೆ ಆರಂಭವಾಗಿದೆ. ಅಧಿಕ ಮಳೆಯಿಂದ ಬಿತ್ತನೆ ವಿಳಂಬವಾಗುತ್ತಿದೆ. ಈ ವೇಳೆ ಹಿಂಗಾರು ಬಿತ್ತನೆಗೆ ಉತ್ತಮ ಆಗಿದೆ. ಹಿಂಗಾರು ಬೆಳೆಗಳು ಹವಾಮಾನ ಆಧಾರಿತ ಆಗಿರುವುದರಿಂದ ವಿಳಂಬ ಆಗಬಾರದು. ಮಳೆ ಒಂದು ವಾರ ಬಿಡುವು ನೀಡಿದರೆ ಬಿತ್ತನೆಗೆ ಅನುಕೂಲ ಆಗಲಿದೆ ಎಂದು ಕುಕನೂರು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ತೇರಿನ ಹೇಳಿದರು.