ವಿವಿಧೆಡೆ ಭಾರೀ ಮಳೆ, ತುಂಬಿದ ಸಣ್ಣಪುಟ್ಟ ಕೆರೆಗಳು..!

| Published : May 22 2024, 12:47 AM IST

ವಿವಿಧೆಡೆ ಭಾರೀ ಮಳೆ, ತುಂಬಿದ ಸಣ್ಣಪುಟ್ಟ ಕೆರೆಗಳು..!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಒಂದು ವಾರದಿಂದ ನಿತ್ಯ ರಾತ್ರಿ ವೇಳೆ ಸುರಿಯುತ್ತಿರುವ ಮಳೆಯಿಂದ ಕೆ.ಆರ್.ಪೇಟೆ ತಾಲೂಕಿನ ಬಹುತೇಕ ಗ್ರಾಮಗಳ ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು, ಸಣ್ಣಪುಟ್ಟ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರು ತುಂಬಿಕೊಂಡಿವೆ. ಭೀಕರ ಬರಗಾಲದಿಂದ ನಲುಗಿದ್ದ ತಾಲೂಕಿನ ರೈತ ಸಮುದಾಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂತಸದ ನಗೆ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಳೆದ ಒಂದು ವಾರದಿಂದ ನಿತ್ಯ ರಾತ್ರಿ ವೇಳೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬಹುತೇಕ ಗ್ರಾಮಗಳ ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು, ಸಣ್ಣಪುಟ್ಟ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರು ತುಂಬಿಕೊಂಡಿವೆ. ಭೀಕರ ಬರಗಾಲದಿಂದ ನಲುಗಿದ್ದ ತಾಲೂಕಿನ ರೈತ ಸಮುದಾಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂತಸದ ನಗೆ ಮೂಡಿಸಿದೆ.

ಮಳೆ ಇಲ್ಲದೇ ಅಂತರ್ಜಲ ಕುಸಿದು ರೈತರ ಕೃಷಿ ಪಂಪ್ ಸೆಟ್ಟುಗಳು ಸ್ಥಗಿತಗೊಂಡಿದ್ದವು. ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ತೆಂಗು, ಅಡಿಕೆ ಮುಂತಾದ ಬೆಳೆಗಳು ಒಣಗುತ್ತಿದ್ದವು. ಕೆರೆ ಕಟ್ಟೆಗಳು ಬರಿದಾಗಿದ್ದರಿಂದ ಜನ - ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿತ್ತು.

ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಅಂತರ್ಜಲ ಮಟ್ಟದಲ್ಲಿ ಹೆಚ್ಚಳವಾಗಿದೆ. ನಿರಂತರ ಮಳೆಯಿಂದ ತಾಲೂಕಿನ ಒಂದೆರಡು ಭಾಗದಲ್ಲಿ ರಸ್ತೆ ಬದಿ ಮರಗಳು ಮುರಿದು ಬಿದ್ದು ಒಂದಷ್ಟು ಕಾಲ ಸಂಚಾರಕ್ಕೆ ವ್ಯತ್ಯವಾದುದು ಬಿಟ್ಟರೆ ಯಾವುದೇ ಗಂಭೀರ ಸಮಸ್ಯೆ ಸೃಷ್ಟಿಯಾಗಿಲ್ಲ.

ನಿರಂತರ ಮಳೆಯಿಂದ ಬತ್ತಿ ಹೋಗಿದ್ದ ತಾಲೂಕಿನ ಹಳ್ಳಕೊಳ್ಳಗಳಿಗೆ ಮರು ಜೀವ ಬಂದಿದೆ. ಕೆರೆಗಳಿಗೆ ಅಲ್ಪಸ್ವಲ್ಪ ನೀರು ಬಂದಿದೆ. ಹೊಲಗದ್ದೆಗಳಲ್ಲಿ ನೀರು ನಿಂತು ಭೂದೇವಿ ಒಡಲು ತಣಿಯುತ್ತಿದೆ. ತಾಲೂಕಿನ ಶೀಳನೆರೆ ಚಿಕ್ಕ ಕೆರೆ ಸೇರಿ ಒಂದೆರಡು ಸಣ್ಣಪುಟ್ಟ ಕೆರೆಗಳಲ್ಲಿ ನೀರು ತುಂಬಕೊಂಡಿದೆ.

ತಾಲೂಕಿನ ನಾರಾಯಣದುರ್ಗ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಕೊಡಲಕುಪ್ಪೆ ಬಳಿ ಹೇಮಾವತಿ ಒಡಲು ಸೇರುವ ತೊರೆಹಳ್ಳ ಮರು ಜೀವ ಪಡೆದಿದೆ. ಹಳ್ಳದ ನೀರಿನಿಂದ ಹೊಸಹೊಳಲಿನ ದೊಡ್ಡಕೆರೆಗೆ ಅಪಾರ ಪ್ರಮಾಣದ ನೀರು ಬಂದು ಸೇರುತ್ತಿದೆ. ಮುಂಗಾರು ಪೂರ್ವ ಮಳೆ ತಾಲೂಕಿನಾದ್ಯಂತ ಜನರ ಮನದಲ್ಲಿ ಸಂತಸ ತಂದಿದೆ.