ಉಡುಪಿ: ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ

| Published : Jun 27 2024, 01:02 AM IST

ಸಾರಾಂಶ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ನದಿಗಳೆಲ್ಲ ತುಂಬಿ ಹರಿಯುತ್ತಿದೆ. ಮಳೆ ಹೀಗೆ ಮುಂದುವರಿದಲ್ಲಿ ಪ್ರವಾಹ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಹಗಲಿಡೀ ಭಾರೀ ಮಳ‍ೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ಜೋರಾದ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನಚ್ಚರಿಕೆ, ಆರೆಂಜ್ ಅಲರ್ಟ್ ಘೋಷಿಸಿದೆ.

ಕಳೆದರೆಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ನದಿಗಳಲ್ಲಾ ತುಂಬಿ ಹರಿಯುತ್ತಿವೆ. ಮಳೆ ಹೀಗೆ ಮುಂದುವರಿದರೇ ಯಾವುದೇ ಕ್ಷಣದಲ್ಲಿ ಪ್ರವಾಹದ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಮುದ್ರ, ನದಿ ತೀರದ ಮತ್ತು ತಗ್ಗು ಪ್ರದೇಶದ ಜನರು ಎಚ್ಚರಿಕೆ ವಹಿಸುವಂತೆ ಮತ್ತು ಪ್ರಕೃತಿ ವಿಕೋಪ ಸಮಿತಿ ಮತ್ತು ಸಂಬಂಧಪಟ್ಟ ಎಲ್ಲ ಇಲಾಖೆಗಳು ಸನ್ನದ್ಧವಾಗಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

ಪಶ್ಚಿಮ ಘಟ್ಟದಲ್ಲಿಯೂ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಸೌಪರ್ಣಿಕಾ, ಸೀತಾ, ವರಾಹಿ, ಪಂಚಗಂಗಾವಳಿ, ಸ್ವರ್ಣಾ ನದಿಗಳು ತುಂಬಿದ್ದು, ಅಕ್ಕಪಕ್ಕದ ತಗ್ಗುಪ್ರದೇಶಗಳಲ್ಲಿ ನೀರು ತುಂಬಿದೆ. ಬೈಂದೂರು, ಬ್ರಹ್ಮಾವರದ ನದಿ ತೀರದ ಗದ್ದೆಗಳಲ್ಲಿ ಈಗಾಗಲೇ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ ರಾತ್ರಿಯ ಮಳೆಗೆ ಜಿಲ್ಲೆಯಲ್ಲಿ ಸುಮಾರು 11 ಮನೆಗಳು ಹಾನಿಗೊಂಡಿದ್ದು, ನೂರಾರು ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.

ಉಡುಪಿ ತಾಲೂಕಿನ ಕಡೆಕಾರು ಗ್ರಾಮದ ಸೀತು ಪೂಜಾರಿ ಅವರ ಮನೆಗೆ ಗಾಳಿಮಳೆಯಿಂದ 25,000 ರು., ಶಿವಳ್ಳಿ ಗ್ರಾಮದ ಶಕುಂತಳ ಗಣೇಶ್ ಅವರ ಮನೆಗೆ 50,000 ರು., ಅಲೆವೂರು ಗ್ರಾಮದ ಪದ್ಮಾವತಿ ಪ್ರಭು ಅವರ ಮನೆಯ ಮೇಲೆ ಮರ ಬಿದ್ದು 70,000 ರು., ಪಡುತೋನ್ಸೆ ಗ್ರಾಮದ ವಿಠ್ಠಲ್ ಪೂಜಾರಿ ಅವರ ಮನೆಯ ಮೇಲೆ ಮರ ಬಿದ್ದು 50,000 ರು. ಹಾನಿಯಾಗಿದೆ.

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಲೋಕೇಶ್ ನಾಯ್ಕ ಅವರ ಮನೆಯ ಮೇಲೆ ಮರ ಬಿದ್ದು 40,000 ರು., ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಲೀಲಾವತಿ ಅವರ ಮನೆಗೆ 35,000 ರು., ಬ್ರಹ್ಮಾವರ ತಾಲೂಕಿನ ವಂಡಾರು ಗ್ರಾಮದ ಶೃಂಗಾರಿ ನಾಯ್ಕ್ ಅವರ ಮನೆಗೆ 20,000 ರು., ಹಾವಂಜೆ ಗ್ರಾಮದ ಗಂಗಾ ಬಡಿಯ ಅವರ ಮನೆಗೆ 35,000 ರು., ನಂಚಾರು ಗ್ರಾಮದ ಗೋವಿಂದ ನಾಯ್ಕ ಅವರ ಮನೆಗೆ 10,000 ರು., ಹೆಗ್ಗುಂಜೆ ಗ್ರಾಮದ ಮಹಾಬಲ ಮರಕಾಲ ಅವರ ಮನೆಗೆ 10,000 ರು., ಕಳ್ತೂರು ಗ್ರಾಮದ ಮಂಜುನಾಥ ನಾಯ್ಕ ಅವರ ಮನೆಗೆ 25,000 ರು. ಹಾನಿಯಾಗಿದೆ.

ಅಲ್ಲದೇ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ವನಜ ಅಣ್ಣಪ್ಪ ಕುಲಾಲ ಅವರ ಜಾನುವಾರು ಕೊಟ್ಟಿಗೆ ಗಾಳಿ ಮಳೆಯಿಂದ 10,000 ರು. ನಷ್ಟವಾಗಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 77.80 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 51.40, ಕುಂದಾಪುರ 91.80, ಉಡುಪಿ 59.70, ಬೈಂದೂರು 92, ಬ್ರಹ್ಮಾವರ 100, ಕಾಪು 74.20, ಹೆಬ್ರಿ 69.90 ಮಿ.ಮೀ. ಮಳೆ ದಾಖಲಾಗಿದೆ.