ಮುಸಲಧಾರೆ ಮಳೆ, ಜನಜೀವನ ಅಸ್ತವ್ಯಸ್ತ

| Published : Aug 26 2024, 01:43 AM IST

ಸಾರಾಂಶ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತಾಲೂಕಿನ ನದಿ, ಸೇತುವೆಗಳು ಉಕ್ಕಿ ಹರಿಯುತ್ತಿದ್ದು, ತಾಲೂಕಿನ 20ಕ್ಕೂ ಅಧಿಕ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ,

ಕನ್ನಡಪ್ರಭ ವಾರ್ತೆ ಖಾನಾಪುರ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತಾಲೂಕಿನ ನದಿ, ಸೇತುವೆಗಳು ಉಕ್ಕಿ ಹರಿಯುತ್ತಿದ್ದು, ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳ ಮೇಲೆ ನೀರು ಹರಿಯುತ್ತಿರುವ ಕಾರಣ ಕಾನನದಂಚಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 20ಕ್ಕೂ ಅಧಿಕ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ,

ನೇರಸಾ-ಗವ್ವಾಳಿ, ಹೆಮ್ಮಡಗಾ-ತಳೇವಾಡಿ, ಚಿಕಲೆ-ಅಮಗಾಂವ, ಮೋದೆಕೊಪ್ಪ-ಕೌಲಾಪುರವಾಡಾ, ದೇವಾಚಿಹಟ್ಟಿ-ತೋರಾಳಿ, ಅಮಟೆ-ಗೋಲ್ಯಾಳಿ, ಹೆಮ್ಮಡಗಾ-ದೇಗಾಂವ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ.

ಸತತ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕೈಕೊಟ್ಟಿದೆ. ಮೊಬೈಲ್ ನೆಟವರ್ಕ್ ಸಹ ಸಿಗದೇ ಕಾನನವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಕಬ್ಬು, ಭತ್ತದ ಗದ್ದೆಗಳು, ಗೆಣಸಿನ ಹೊಲಗಳು ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದೆ. ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.

ತಾಲೂಕಿನ ಕಣಕುಂಬಿ, ಜಾಂಬೋಟಿ, ಲೋಂಡಾ ಮತ್ತು ಭೀಮಗಡ ಅರಣ್ಯಗಳಲ್ಲಿ ಮುಸಲಧಾರೆಯಿಂದ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಹಾಗೂ ಅಲಾತ್ರಿ, ಕಳಸಾ-ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ, ಕೋಟ್ನಿ ಮತ್ತಿತರ ಹಳ್ಳಗಳಲ್ಲಿ ಪ್ರವಾಹ ಏರ್ಪಟ್ಟಿದೆ. ಭಾರಿ ಮಳೆ-ಗಾಳಿಯಿಂದಾಗಿ ತಾಲೂಕಿನ ಅರಣ್ಯ ಭಾಗದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.

ಕಂದಾಯ ಇಲಾಖೆಯ ಮಾಹಿತಿ ಪ್ರಕಾರ ಭಾನುವಾರದವರೆಗೆ ತಾಲೂಕಿನ ಕಣಕುಂಬಿಯಲ್ಲಿ 127 ಮಿ.ಮೀ, ಅಸೋಗಾದಲ್ಲಿ 72 ಮಿ.ಮೀ, ಗುಂಜಿಯಲ್ಲಿ 73.4 ಮಿ.ಮೀ, ಲೋಂಡಾದಲ್ಲಿ 93 ಮಿ.ಮೀ, ನಾಗರಗಾಳಿಯಲ್ಲಿ 63 ಮಿ.ಮೀ, ಜಾಂಬೋಟಿಯಲ್ಲಿ 70 ಮಿ.ಮೀ ಮತ್ತು ಖಾನಾಪುರ ಪಟ್ಟಣದಲ್ಲಿ 86 ಮಿ.ಮೀ, ಬೀಡಿಯಲ್ಲಿ 52 ಮಿ.ಮೀ ಮತ್ತು ಕಕ್ಕೇರಿಯಲ್ಲಿ 41 ಮಿ.ಮೀ ಮಳೆಯಾಗಿದೆ.