ಕುಮಟಾ: ತಾಲೂಕಿನಾದ್ಯಂತ ಗುರುವಾರ ರಾತ್ರಿ ಅಬ್ಬರಿಸಿದ ಭಾರಿ ಗಾಳಿ ಮಳೆ, ಸಿಡಿಲಿಗೆ ಮರ, ವಿದ್ಯುತ್ ಕಂಬಗಳು ಮನೆ ಮೇಲೆ ಬಿದ್ದು ಸಾಕಷ್ಟು ಹಾನಿಯಾಗಿದೆ.

ಬೆಟ್ಕುಳಿಯ ಕುರಿಗದ್ದೆ ಎಂಬಲ್ಲಿ ಗೌರಿ ಗಣಪತಿ ಪಟಗಾರ ಅವರ ಮನೆಯ ಮೇಲೆ ತೆಂಗಿನ ಮರ ಮುರಿದು ಬಿದ್ದು ಭಾಗಶಃ ಹಾನಿಯಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಯಾರಿಗೂ ಸಮಸ್ಯೆಯಾಗಿಲ್ಲ. ಪಟ್ಟಣದ ಕಲಭಾಗ ವ್ಯಾಪ್ತಿಯ ನಾಗದೇವಿ ರಸ್ತೆ ಸನಿಹದ ಸದಾನಂದ ತಿಮ್ಮಪ್ಪ ಅಗ್ರವಾಡೇಕರ ಅವರ ಮನೆಯ ಮಹಡಿಯ ಮೇಲೆ ತೆಂಗಿನಮರ ಮುರಿದು ಬಿದ್ದು ಭಾಗಶಃ ಹಾನಿಯಾಗಿದೆ. ಯಾರಿಗೂ ಪೆಟ್ಟಾಗಿಲ್ಲ.

ಬೆಟ್ಕುಳಿ ಸನಿಹದ ಮೊರಬದ ಮಾಲಿಗದ್ದೆ ರಸ್ತೆಯಲ್ಲಿ ಸಿಡಿಲು ಬಡಿದು ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬ ಅಲ್ಲಿನ ಯಾದವ ದಾನು ಹಳ್ಳೇರ ಮನೆ ಮೇಲೆ ಮುರಿದು ಬಿದ್ದು ಭಾಗಶಃ ಹಾನಿಯಾಗಿದೆ. ಜನ ಅಥವಾ ಜಾನುವಾರುಗಳಿಗೆ ಹಾನಿಯಾಗಿಲ್ಲ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಗಡೆಯ ಮಚಗೋಣದಲ್ಲಿ ತಿಮ್ಮಪ್ಪ ಜಟ್ಟಿ ಪಟಗಾರ ಎಂಬವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಬಚಾವಾಗಿದ್ದಾರೆ. ಸಿಡಿಲು ಬಡೆದ ಹೊಡೆತಕ್ಕೆ ವಿದ್ಯುತ್ ಮೀಟರ್ ಬೋರ್ಡ್ ಸಹಿತ ಬಹುತೇಕ ಎಲ್ಲ ವೈರಿಂಗ್‌ ಸುಟ್ಟಿದೆ. ಟಿ.ವಿ. ಇನ್ನಿತರ ವಿದ್ಯುತ್ ಸಾಮಗ್ರಿಗಳು ಹಾ‍ಳಾಗಿದ್ದು, ಲಕ್ಷಾಂತರ ಮೌಲ್ಯದ ಹಾನಿಯಾಗಿದೆ.

ಪುರಸಭೆ ಅಥವಾ ಗ್ರಾಮ ಪಂಚಾಯಿತಿಗಳಿಂದ ಇನ್ನೂ ತನಕ ಮಳೆಗಾಲ ಪೂರ್ವ ಸಿದ್ಧತೆಗಳು ನಡೆದಿಲ್ಲವಾದ್ದರಿಂದ ರಭಸದಿಂದ ತಾಸುಗಟ್ಟಲೆ ಮಳೆ ಸುರಿದಿದಾಗ ಗಟಾರಗಳಲ್ಲಿ ಕಟ್ಟಿಕೊಂಡಿದ್ದ ಪ್ಲಾಸ್ಟಿಕ್ ಇನ್ನಿತರ ಕಸತ್ಯಾಜ್ಯಗಳು ರಸ್ತೆಯ ಮೇಲೆ ಹರಡಿಕೊಳ್ಳುವಂತಾಗಿದೆ.


ಗಾಳಿ ಮಳೆ ಅಬ್ಬರ: ಮನೆಗೆ ಹಾನಿ

ಹೊನ್ನಾವರ: ತಾಲೂಕಿನಲ್ಲಿ ಎರಡು ದಿನದ ಹಿಂದೆ ಸಾಧಾರಣವಾಗಿ ಸುರಿದಿದ್ದ ಮಳೆ ಗುರುವಾರ ರಾತ್ರಿ ಮತ್ತೆ ಅಬ್ಬರಿಸಿದೆ. ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿಯೊಂದಿಗೆ ಪ್ರಾರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಸುರಿದಿದೆ. ಗ್ರಾಮೀಣ ಮತ್ತು ಪಟ್ಟಣ ಭಾಗದಲ್ಲಿ ಮಳೆ ಚೆನ್ನಾಗಿ ಆಗಿದೆ. ತಾಲೂಕಿನ ಕರ್ಕಿ, ಹಳದೀಪುರ, ಹೊನ್ನಾವರ ಪಟ್ಟಣ, ಗೇರುಸೊಪ್ಪಾ, ಗುಂಡಬಾಳ, ಕವಲಕ್ಕಿ, ಹಡಿನಬಾಳ, ಮಂಕಿ, ಗುಣವಂತೆ ಸೇರಿ ಮೊದಲಾದ ಕಡೆಗಳಲ್ಲಿ ಮಳೆ ಜೋರಾಗಿದೆ.ಗಾಳಿ ಮಳೆಯ ಅಬ್ಬರಕ್ಕೆ ತಾಲೂಕಿನ ಗುಣವಂತೆ ಗ್ರಾಮದ ಆಚಾರಿಕೇರಿ ಯಲ್ಲಿ ಪದ್ಮಾ ಶಿವರಾಂ ಆಚಾರಿ ಎನ್ನುವವರ ಮನೆಯ ಮೇಲೆ ರಾತ್ರಿ 11.30ರ ಸುಮಾರಿಗೆ ಬೀಸಿದ ಗಾಳಿ ಮಳೆಯಿಂದ ಕಾಡು ಜಾತಿ ಮರವೊಂದು ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ಇದರಲ್ಲಿ ಯಾವುದೇ ಜನ ಜಾನುವಾರು ಜೀವ ಹಾನಿಯಾಗಿಲ್ಲ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿದೆ ಎನ್ನಲಾಗಿದ್ದು, ಮಳೆ ಆಗಾಗ್ಗೆ ಬೀಳುವ ಸಾಧ್ಯತೆಗಳಿವೆ. ಜನರು ಮುಂಜಾಗ್ರತೆ ವಹಿಸಲು ತಿಳಿಸಲಾಗಿದೆ.