ಸಾರಾಂಶ
ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಸುರಿದ ಭಾರೀ ಮಳೆ ಗಾಳಿಗೆ 14.57 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ನೆಲಕಚ್ಚಿದೆ. ಇನ್ನೂ 4 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದ್ದು, ಕೂಡ್ಲಿಗಿ ತಾಲೂಕಿನಲ್ಲಿ ಎರಡು ಮನೆಗಳು ಉರುಳಿವೆ. ಇನ್ನೂ ಹೊಸಪೇಟೆ ನಗರದ ಶ್ರೀ ಮಾರ್ಕಂಡೇಶ್ವರ ದೇವಾಲಯದ ಕಳಶ ಕಳಚಿ ಬಿದ್ದಿದೆ.
ಹೊಸಪೇಟೆ ತಾಲೂಕಿನ ಹೊಸೂರು ಮಾಗಾಣಿ ಬಳಿ ಬಾಳೆ ಬೆಳೆ ನೆಲಕ್ಕುರುಳಿದೆ. ಹೊಸೂರು ಭಾಗದಲ್ಲಿ ಬಾಳೆಗೊನೆಗಳು, ಎಳೆ ಬಾಳೆಗೊನೆಗಳು ನೆಲಕ್ಕುರುಳಿವೆ. ಕೆಜಿಗೆ 18ರಿಂದ 20 ರು.ಗೆ ಬಾಳೆಹಣ್ಣು ಮಾರಾಟ ಮಾಡಲಾಗುತ್ತದೆ. ಆದರೆ, ಈ ಬಾಳೆ ಎಳೆ ಆಗಿರುವ ವ್ಯಾಪಾರಿಗಳು ಖರೀದಿಸುವುದಿಲ್ಲ. ಕಳೆದ ಬಾರಿಯೂ ಮಳೆ ಬಂದು ಹಾನಿಯಾಗಿದೆ. ಈ ಬಾರಿಯೂ ಸಾಲ ಮಾಡಿ ನಾವು ಬಾಳೆ ಬೆಳೆ ಬೆಳೆದಿದ್ದೇವೆ. ಪ್ರತಿಬಾರಿ ಹೀಗಾದರೆ, ಹೇಗೆ ಎಂದು ರೈತರು ಪ್ರಶ್ನಿಸಿದ್ದಾರೆ.
ಕಳೆದ ಬಾರಿ ಬಿದ್ದಾಗ, ಅಧಿಕಾರಿಗಳು, ಶಾಸಕರು ಬಂದಿದ್ದರು. ಆದರೆ, ಒಂದು ನಯಾ ಪೈಸೆ ಪರಿಹಾರ ಬಂದಿಲ್ಲ.
ಈ ಬಾರಿಯೂ ಪರಿಹಾರ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಎಂದು ರೈತ ಮಾರುತಿ ಅಳಲು ತೋಡಿಕೊಂಡರು.
ರಾಜಾಪುರ, ಹೊಸೂರು, ಚಿತ್ತವಾಡ್ಗಿ, ಮುದ್ಲಾಪುರ, ಡಣನಾಯಕನಕೆರೆ ಪ್ರದೇಶದಲ್ಲಿ ಬಾಳೆ ಬೆಳೆಗಳು ನೆಲಕಚ್ಚಿವೆ. ಇನ್ನೂ ನಗರದ ಶ್ರೀ ಮಾರ್ಕಂಡೇಶ್ವರ ದೇವಾಲಯದ ಗೋಪುರದ ಕಳಸ ಭಾರೀ ಗಾಳಿ, ಮಳೆಗೆ ಕಳಚಿ ಬಿದ್ದಿದೆ. ಇನ್ನೂ ಕೂಡ್ಲಿಗಿ ತಾಲೂಕಿನಲ್ಲಿ ಎರಡು ಮನೆಗಳು ಬಿದ್ದಿವೆ. ಹೊಸಪೇಟೆ ನಗರದಲ್ಲಿ ಹತ್ತಾರು ಮರಗಳು ಹಾಗೂ ಕರೆಂಟ್ ಕಂಬಗಳು ಉರುಳಿ ಬಿದ್ದಿದ್ದು, ಜೆಸ್ಕಾಂ ಸಿಬ್ಬಂದಿ ಕರೆಂಟ್ ಸರಬರಾಜಿಗಾಗಿ ಇಡೀ ದಿನ ಕಾರ್ಯ ನಿರ್ವಹಿಸಿದರು. ಕರೆಂಟ್ ಇಲ್ಲದೇ ಬೆಳಗಿನಜಾವದಿಂದ ಒದ್ದಾಡಿದ ಜನರು, ಮಧ್ಯಾಹ್ನ 3 ಗಂಟೆಯವರೆಗೂ ಕರೆಂಟ್ ಇಲ್ಲದೇ ಪರದಾಡಿದರು.
ನೆಲಕ್ಕುರುಳಿದ ಮಂಗಳಮುಖಿಯರ ಗುಡಿಸಲು
ನಗರದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾಸ್ಪತ್ರೆ ಸಮೀಪದಲ್ಲಿ ಹಾಕಿರುವ ಮಂಗಳಮುಖಿಯರ ಗುಡಿಸಲುಗಳು ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಕಿತ್ತು ನೆಲಕ್ಕುರುಳಿವೆ. ಒಂದೇ ಕಡೆ ಸುಮಾರು 30ಕ್ಕೂ ಹೆಚ್ಚು ಗುಡಿಸಲುಗಳಿದ್ದು, ಕೆಲವು ಗಾಳಿಗೆ ಕಿತ್ತು ಬಿದ್ದಿವೆ. ತಮಗೆ ನಿವೇಶನ ಗುರುತಿಸಿ ಮನೆ ನಿರ್ಮಿಸಿಕೊಡಬೇಕೆಂದು ಮಂಗಳಮುಖಿಯರು ಆಗ್ರಹಿಸಿದ್ದಾರೆ.