ರಾಮನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

| Published : May 04 2024, 12:33 AM IST

ಸಾರಾಂಶ

ರಾಮನಗರ: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ರೇಷ್ಮೆ ನಗರಿ ರಾಮನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಮರಗಳು ಧರೆಗುರುಳಿವೆ. ಬಿಸಿಲಿನ ತಾಪಕ್ಕೆ ಮಳೆರಾಯ ತಂಪೆರೆದಿದ್ದಾನೆ.

ರಾಮನಗರ: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ರೇಷ್ಮೆ ನಗರಿ ರಾಮನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಮರಗಳು ಧರೆಗುರುಳಿವೆ. ಬಿಸಿಲಿನ ತಾಪಕ್ಕೆ ಮಳೆರಾಯ ತಂಪೆರೆದಿದ್ದಾನೆ.

ಜಿಲ್ಲೆಯ ಹಲವೆಡೆ ಗುಡುಗ, ಬಿರುಗಾಳಿ ಸಹಿತ ಮಳೆಯಾಗಿದ್ದು ಬಿರುಗಾಳಿ ರಭಸಕ್ಕೆ ಮರ,ರಂಬೆ ಕೊಂಬೆಗಳು ಧರೆಗುರುಳಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಲವಡೆ ಮರಗಳು ಧರೆಗುರುಳಿದ್ದು, ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು.

ರಸ್ತೆಯಲ್ಲಿ ಮಳೆ ನೀರು ರಭಸವಾಗಿ ಹರಿದಿದ್ದರಿಂದ ವಾಹನಗಳ ಸಂಚಾರಕ್ಕೂ ತೊಂದರೆಯಾಗಿತ್ತು. ಕಚೇರಿಗಳಿಂದ ಮನೆಗಳಿಗೆ ತೆರಳಲಾಗದೆ ಜನರು ತೊಂದರೆ ಅನುಭವಿಸಿದರು.

ಸರ್ವಿಸ್ ರಸ್ತೆ ಜಲಾವೃತ:

ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಸರ್ವಿಸ್ ರಸ್ತೆಯಲ್ಲಿನ ಚರಂಡಿಯಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲಿಲ್ಲ. ಹೀಗಾಗಿ ಸರ್ವಿಸ್ ರಸ್ತೆಯಲ್ಲಿಯೇ ನೀರು ಸಂಗ್ರಹಗೊಂಡಿದ್ದರಿಂದ ದ್ವಿಚಕ್ರ ಸೇರಿ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಮುರಿದು ಬಿದ್ದ ಬೃಹತ್ ಜಾಹೀರಾತು ಫಲಕ :

ಕುಂಬಳಗೂಡಿನಲ್ಲಿ ಕಟ್ಟಡದ ಮೇಲಿದ್ದ ಬೃಹತ್ ಗಾತ್ರದ ಜಾಹೀರಾತು ಫಲಕವೊಂದು ಬಿರುಗಾಳಿಗೆ ಮುರಿದುಕೊಂಡು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಮೇಲೆ ವಾಲಿಕೊಂಡು ನಿಂತಿತ್ತು.

ಜಾಹೀರಾತು ಫಲಕ ಸರ್ವಿಸ್ ರಸ್ತೆಗೆ ಬಿದ್ದಿದ್ದರೆ ಪ್ರಾಣಹಾನಿ ಸಂಭವಿಸುತ್ತಿತ್ತು. ಅದೃಷ್ಟ ವಶಾತ್ ಫಲಕ ಫ್ಲೈಓವರ್ ಮೇಲೆ ವಾಲಿಕೊಂಡು ನಿಂತಿದ್ದರಿಂದ ಅನಾಹುತ ತಪ್ಪಿತು. ಈ ಮಾರ್ಗದ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕ್ರೇನ್ ಗಳ ಸಹಾಯದಿಂದ ಜಾಹೀರಾತು ಫಲಕವನ್ನು ತೆರವುಗೊಳಿಸಲಾಯಿತು.

ಟ್ರಾನ್ಸ್ ಫಾರ್ಮರ್ - ವಿದ್ಯುತ್ ಕಂಬಗಳಿಗೂ ಹಾನಿ:

ಚನ್ನಪಟ್ಟಣದ ಕೆಂಗಲ್ ದೇಗುಲದ ಎದುರು ಟ್ರಾನ್ಸ್ ಫಾರ್ಮರ್ ಮುರಿದು ಬಿದ್ದಿದೆ. ಅಲ್ಲದೆ, ರಸ್ತೆ ಬದಿಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಸಮೇತ ಧರೆಗೆ ಉರುಳಿದ್ದು, ವಿದ್ಯುತ್ ಕಂಬಗಳು ಉರುಳಿ ಬೀಳುವ ಸ್ಥಿತಿಯಲ್ಲಿವೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆ ಬದಿಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು.

ಇನ್ನು ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರು ಇದೀಗ ಮಳೆರಾಯನ ಆಗಮನಕ್ಕೆ ಸಂತಸಗೊಂಡಿದ್ದಾರೆ. ಮಳೆಯಾದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಬಾಕ್ಸ್‌...........

ಮಳೆರಾಯನಿಗೆ ಪೂಜೆ ಸಲ್ಲಿಸಿದ ಮಕ್ಕಳು

ಮಾಗಡಿ: ತಾಲೂಕಿನ ಕೆ.ಪಿ.ದೊಡ್ಡಿ ಗ್ರಾಮದಲ್ಲಿ ವರ್ಷದ ಮಳೆ ಹಿನ್ನೆಲೆಯಲ್ಲಿ ಮಕ್ಕಳು ಮಳೆ ರಾಯನಿಗೆ ಪೂಜೆ ಸಲ್ಲಿಸಿದರು.

ಮೊದಲಬಾರಿಗೆ ಮಳೆಬಂದ ಹಿನ್ನೆಲೆ ಗ್ರಾಮ ದೇವತೆ ಪೂಜೆ ಸಲ್ಲಿಸಿದ ಮಕ್ಕಳು ಮಳೆ ರಾಯನಿಗೂ ಪೂಜೆ ಸಲ್ಲಿಸಿ ಬರಗಾಲ ನೀಗಿಸುವಂತೆ ಪ್ರಾರ್ಥಿಸಿದರು.ಬಾಕ್ಸ್‌.......

ಸಿಡಿಲು ಬಡಿದು ಮಲೆ ಕುಡಿಯರ ಹಾಡಿ ಭಸ್ಮ

ರಾಮನಗರ: ನಗರದ ಹೊರ ವಲಯದ ಜಾನಪದ ಲೋಕದಲ್ಲಿ ನಿರ್ಮಿಸಿಲಾಗಿದ್ದ ಮಲೆ ಕುಡಿಯರ ಮನೆ (ಹಾಡಿ)ಸಿಡಿಲ ಬಡಿತಕ್ಕೆ ಭಸ್ಮಗೊಂಡಿರುವ ಘಟನೆ ನಡೆದಿದೆ.

ಜಾನಪದ ಲೋಕದ ಗಿರಿಜನ ಲೋಕದಲ್ಲಿ ಸುಮಾರು 15 ಲಕ್ಷ ರುಪಾಯಿ ವೆಚ್ಚದಲ್ಲಿ ಮಲೆ ಕುಡಿಯರ ಹಾಡಿ ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ಹಲವು ಹಾಡಿಗಳನ್ನು ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದೆ.

ಈ ಪೈಕಿ ಮಲೆ ಕುಡಿಯರ ಮನೆಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದೆ. ಹಾಡಿಯಲ್ಲಿದ್ದ ಬೊಂಬೆಗಳು, ಪ್ರತಿಮೆಗಳು, ಫೋಟೋಗಳು ಸುಟ್ಟು ಕರಕಲಾಗಿವೆ. ಸಿಸಿ ಟಿವಿ ಕ್ಯಾಮೆರಾ ಸೇರಿದಂತೆ ಇತರೆ ಉಪಕರಣಗಳಿಗೂ ಹಾನಿ ಉಂಟಾಗಿದೆ.

ಈ ಘಟನೆ ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಜಾನಪದ ಲೋಕದಲ್ಲಿ ಬಿರುಗಾಳಿಗೆ ಸಿಲುಕಿ ನಾಲ್ಕೈದು ಮರಗಳು ಮುರಿದು ಬಿದ್ದಿವೆ. ಅಲ್ಲದೆ, ಕಂಪ್ಯೂಟರ್ , ಸಿಸಿ ಕ್ಯಾಮೆರಾ ಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ.

3ಕೆಆರ್ ಎಂಎನ್ 2,3,4,5,.ಜೆಪಿಜಿ

2.ಕುಂಬಳಗೂಡಿನಲ್ಲಿ ಬೃಹತ್ ಜಾಹೀರಾತು ಫಲಕ ಮುರಿದು ಫ್ಲೈಓವರ್ ಗೆ ವಾಲಿಕೊಂಡು ನಿಂತಿರುವುದು

3.ಮಾಗಡಿ ತಾಲೂಕು ಕೆ.ಪಿ.ದೊಡ್ಡಿ ಗ್ರಾಮದಲ್ಲಿ ಮಕ್ಕಳು ಮಳೆರಾಯನಿಗೆ ಪೂಜೆ ಸಲ್ಲಿಸಿದರು.

4.ಮಲೆ ಕುಡಿಯರ ಹಾಡಿ ಬೆಂಕಿಗಾಹುತಿಯಾಗಿರುವುದು

5.ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುತ್ತಿರುವುದು