ಶನಿವಾರ ಬೆಳಗಿನಿಂದ ಸಂಜೆಯವರೆಗೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆ, ಅಂಗಡಿಗಳಿಗೆ ನೀರು ನುಗ್ಗಿದ ಘಟನೆ ನಡೆದಿದೆ.

ಬೆಳ್ತಂಗಡಿ: ಶನಿವಾರ ಬೆಳಗಿನಿಂದ ಸಂಜೆಯವರೆಗೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆ, ಅಂಗಡಿಗಳಿಗೆ ನೀರು ನುಗ್ಗಿದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅಲ್ಲಲ್ಲಿ ವಾಹನ ಸಂಚಾರ ವ್ಯತ್ಯಯ, ತೋಟಗಳಿಗೆ ನೀರು ನುಗ್ಗಿದೆ.

ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳು ತುಂಬಿ ಹರಿದು ಮುಂಡಾಜೆ, ಕಾಯರ್ತೋಡಿ, ಕಡಂಬಳ್ಳಿ, ಆನಂಗಳ್ಳಿ, ಮುಂಡ್ರುಪಾಡಿ, ಅರೆಕಲ್ಲು, ಕುಡೆಂಚಿ, ಮೊಗ್ರು, ಮುಗೇರಡ್ಕ, ದಂಬೆತ್ತಿಮಾರು, ಬರೆಮೇಲು ಮೊದಲಾದ ಕಡೆ ನೂರಾರು ಕೃಷಿ ತೋಟಗಳು ಜಲಾವೃತಗೊಂಡವು.ಕಿಲ್ಲೂರು-ಲಾಯಿಲ ರಸ್ತೆಗೆ ಸೋಮಾವತಿ ನದಿಯು ಪುತ್ರಬೈಲು ಸಮೀಪ ನುಗ್ಗಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಯಿತು. ಕುತ್ರೊಟ್ಟು-ಚಂದ್ಕೂರು ಸೇತುವೆ ಜಲಾವೃತಗೊಂಡು ವಾಹನ ಸಂಚಾರ ನಿಲ್ಲಿಸಲಾಯಿತು. ಉಜಿರೆ-ಗುರಿಪಳ್ಳ ರಸ್ತೆಯ ಅಂಬಡಬೆಟ್ಟು ಸಂಚಾರದ ನೂತನ ಸೇತುವೆ ಮುಳುಗುವ ಭೀತಿ ಎದುರಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ಧರ್ಮಸ್ಥಳ ಉಜಿರೆ ರಸ್ತೆಯ ಮಣ್ಣಸಂಕ ಎಂಬಲ್ಲಿ ರಸ್ತೆಯಲ್ಲಿ ಐದು ಅಡಿಯಷ್ಟು ನೀರು ಹರಿದು ಸುಮಾರು ಒಂದು ತಾಸು ಕಾಲ ಸಂಚಾರ ವ್ಯತ್ಯಯವಾಯಿತು.ಬೆಳ್ತಂಗಡಿ ರಸ್ತೆಯ ಕೆಳಗಿನ ಪೆಟ್ರೋಲ್ ಬಂಕ್ ಬಳಿ ಚರಂಡಿ ನೀರು ರಸ್ತೆಗೆ ನುಗ್ಗಿ ಸಂಚಾರಕ್ಕೆ ತೊಂದರೆಯಾಗಿದೆ.

ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದ ತಡೆಗೋಡೆ ಕುಸಿದು ಲಕ್ಷಾಂತರ ರು. ಹಾನಿಯಾಗಿದೆ.

ಧರ್ಮಸ್ಥಳ- ಕಲ್ಮಂಜ ರಸ್ತೆಯ ಗುಂಡಿ ಬಳಿ ಧರೆ ಕುಸಿದು ವಾಹನ ಸಂಚಾರಕ್ಕೆ ತೊಡಕಾಗಿದೆ. ಗುಡ್ಡ ಭಾಗದಿಂದ ನೀರು ಹರಿದು ಬರುತ್ತಿದ್ದು, ಅಪಾಯ ಸಾಧ್ಯತೆ ಇದೆ.

ಲಾಯಿಲ ಗ್ರಾಮದ ಆದರ್ಶ ನಗರದಲ್ಲಿ ರತ್ನಾಕರ ಆಚಾರ್ಯ ಎಂಬವರು ನಿರ್ಮಿಸುತ್ತಿರುವ ನೂತನ ಮನೆಯ ಆವರಣ ಗೋಡೆ ಕುಸಿದು ಕೆಳ ಭಾಗದಲ್ಲಿರುವ ಉಮೇಶ್ ಆಚಾರ್ಯ ಎಂಬವರ ಮನೆಗೆ ಹಾನಿಯಾಗಿದೆ. ಆವರಣ ಗೋಡೆ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಮನೆಯೊಳಗಿದ್ದ ಮಹಿಳೆ ಗಾಯಗೊಂಡಿದ್ದಾರೆ.

ಮಿತ್ತಬಾಗಿಲು ಗ್ರಾಮದ ಕೊಪ್ಪದ ಗಂಡಿ, ಚಾರ್ಮಾಡಿ ಗ್ರಾಮದ ಅರಣಪಾದೆ ಕಿರು ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.ಚಿಬಿದ್ರೆ ಗ್ರಾಮದ ಪೆರಿಯಡ್ಕ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಮುಂಡಾಜೆಯ ಅಣ್ಣು ಕಜೆ, ಮಹೇಂದ್ರ ಪರಾಂಜಪೆ ಎಂಬವರ ಮನೆ ಹಿಂಭಾಗದ ಗುಡ್ಡ ಕುಸಿದಿದೆ. ಮುಂಡಾಜೆಯ ಸೋಮಂತಡ್ಕದ ಖಾಸಗಿ ಮೊಬೈಲ್ ಟವರ್ ನ ವಿದ್ಯುತ್ ಪರಿವರ್ತಕದ ಸಮೀಪ ಗುಡ್ಡ ಕುಸಿದಿದೆ. ಧರ್ಮಸ್ಥಳದ ಪೊಸಳಿಗೆಯಲ್ಲಿ ಕೃಷ್ಣಪ್ಪ ಎಂಬವರ ಮನೆಗೆ ನೀರು ನುಗ್ಗಿದೆ.ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು, ಮುಂಡಾಜೆ ಸೋಮಂತಡ್ಕ, ಬಲ್ಯಾರ್ ಕಾಪು, ಅಗರಿ ಮೊದಲಾದ ರಸ್ತೆಗಳಲ್ಲಿ ನೀರು ತುಂಬಿ ಹರಿದು ಕೆಲವು ಮನೆಗಳಿಗೆ ನುಗ್ಗಿದೆ. ಇನ್ನು ಕೆಲವು ಮನೆಗಳ ಅಂಗಳಗಳು ಜಲಾವೃತಗೊಂಡಿವೆ. ಗಣೇಶ ಶೆಟ್ಟಿ, ರವಿಚಂದ್ರ, ಸೇಸಪ್ಪ ಎಂಬವರ ಮನೆಗಳೊಳಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.ಬೆಳ್ತಂಗಡಿ ಪೇಟೆ ಸನಿಹದ ಸೋಮಾವತಿ ನದಿ ಉಕ್ಕಿ ಹರಿದಿದೆ. ಶಿಶಿಲದಲ್ಲಿ ಕಪಿಲಾ ನದಿ ತುಂಬಿ ಹರಿದ ಪರಿಣಾಮ ಶಿಶಿಲೇಶ್ವರ ದೇವಸ್ಥಾನಕ್ಕೆ ಹೋಗುವ ಸೇತುವೆ ಮುಳುಗಿದೆ. ಸೇತುವೆಯ ಕೆಳ ಭಾಗದಲ್ಲಿ ಸಂಗ್ರಹಗೊಂಡ ಅಪಾರ ಪ್ರಮಾಣದ ಮರಮಟ್ಟುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

ಉಜಿರೆ ಕೆಳಗಿನ ಪೆಟ್ರೋಲ್ ಪಂಪ್ ನಿಂದ ಬೆನಕ ಆಸ್ತ್ರತ್ರೆ ತನಕದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡು ನದಿಯಂತೆ ಭಾಸವಾಗಿತ್ತು. ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದ್ದರೂ ಅಪಾಯ ಉಂಟಾಗಿಲ್ಲ.